ದೇವದುರ್ಗ ತಾಲೂಕು ಹೊಸೂರು ಸಿದ್ದಾಪುರ ಗ್ರಾಮದಲ್ಲಿ ಜೆಸ್ಕಾಂ ಸಿಬ್ಬಂದಿ ಜತೆ ರೈತರು ಟಿಸಿ ಜೋಡಿಸಿರುವುದು. 
ಜಿಲ್ಲೆ

ಕೊತ್ತದೊಡ್ಡಿ, ಹೊಸೂರು ಸಿದ್ದಾಪುರ ಕೃಷಿಕರಿಗೆ ಟಿಸಿ ನೀಡಿದ ಜೆಸ್ಕಾಂ

ದೇವದುರ್ಗ: ವಿವಿಧ ಕಾರಣದಿಂದ ರಿಪೇರಿಗೆ ಬಂದಿದ್ದ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ಜೆಸ್ಕಾಂ ಸಿಬ್ಬಂದಿ ದುರಸ್ತಿಗೊಳಿಸಿ ವಿತರಣೆ ಮಾಡಿದೆ. ಇದರಿಂದ ಕೃಷಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮಳೆ, ಗಾಳಿಗೆ ಹಾಗೂ ಅನಿಯಮಿತ ವಿದ್ಯುತ್‌ನಿಂದ ತಾಲೂಕಿನ ವಿವಿಧ ಗ್ರಾಮಗಳ ರೈತರ ಟಿಸಿಗಳು ಸುಟ್ಟಿದ್ದವು. ಕೊತ್ತದೊಡ್ಡಿ, ಗುಂಡಗುರ್ತಿ, ನಗರಗುಂಡ, ಹೊಸೂರು ಸಿದ್ದಾಪುರ ಸೇರಿ ವಿವಿಧೆಡೆ ಟಿಸಿಗಳು ಹಾಳಾಗಿದ್ದವು. ಇದರಿಂದ ರೈತರು ಹಲವು ಸಲ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಮಳೆಗಾಲ ಆರಂಭವಾಗಿ ಕೃಷಿ ಚಟುವಟಿಕೆಗಳು ಚುರುಕು ಪಡೆದರೂ ಟಿಸಿ ದುರಸ್ತಿಗೊಳಿಸದಕಾರಣ ಬೆಳೆಗಳಿಗೆ ನೀರು ಹರಿಸಲು ತೊಂದರೆಯಾಗಿತ್ತು.

ಈ ಕುರಿತು ವಿಜಯವಾಣಿ ಜೂ.12ರಂದು ‘ಪಂಪ್‌ಸೆಟ್ ಲೈನ್‌ಗೆ ಪರದಾಟ’ ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತುಕೊಂಡ ಜೆಸ್ಕಾಂ ಕಳೆದ ಒಂದು ವಾರದಿಂದ ವಿವಿಧ ಭಾಗದ ರೈತರ ಟಿಸಿ ರಿಪೇರಿ ಮಾಡಿ ವಿತರಿಸುತ್ತಿದೆ.

ಕೊತ್ತದೊಡ್ಡಿ, ಹೊಸೂರು ಸಿದ್ದಾಪುರ ಸೇರಿ ವಿವಿಧೆಡೆ ಕೆಟ್ಟುನಿಂತಿದ್ದ ಟಿಸಿಗಳನ್ನು ದುರಸ್ತಿ ಮಾಡಿಸಿ ರೈತರ ಜಮೀನಿನಲ್ಲಿ ಜೋಡಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದ್ದು ಬೆಳೆಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ.