ಮಂಡ್ಯ: ದೊಡ್ಡ ದೊಡ್ಡ ದಾರ್ಶನಿಕರು ನಿಸರ್ಗ ಮತ್ತು ಕೃಷಿಗೆ ಮತ್ತೆ ಹಿಂದಿರುಗಿ ಎಂದಿದ್ದಾರೆ. ಎಂದಾದರೂ ಒಂದು ದಿನ ಪಟ್ಟಣ, ನಗರಗಳಲ್ಲಿರುವವರು ಮತ್ತೆ ಹಳ್ಳಿಗಳಿಗೆ ಹಿಂದಿರುಗಿ ಕೃಷಿ ಅವಲಂಬಿಸಬೇಕಾಗುತ್ತದೆ. ಕೃಷಿಯಲ್ಲಿ ಅನ್ವೇಷಣಾ ಭಾವನೆ ಹೊಂದಿರುವವರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಹನಕೆರೆ ಗ್ರಾಮದಲ್ಲಿ ಪ್ರಗತಿಪರ ರೈತ, ಚಲನಚಿತ್ರ ನಿರ್ದೇಶಕ ಹನಕೆರೆ ರತ್ನಜ ಸ್ಥಾಪಿಸಿರುವ ಜರ್ಮಿನೋ ಫೀಡ್ಸ್ ಘಟಕ ಉದ್ಘಾಟನೆ, ಜರ್ಮಿನೋ ಫೀಡ್ಸ್ ಮತ್ತು ಸೈಲೇಜ್(ರಸಮೇವು) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕುವೆಂಪು ಆಶಯದಂತೆ ನೇಗಿಲಯೋಗಿ ಆಗಲು ಕೃಷಿಕರಲ್ಲಿ ಅನ್ವೇಷಣಾ ಸಾಹಸ ಪ್ರೌವೃತ್ತಿ ಇರಬೇಕು. ಮಂಡ್ಯ ಶೇ.100ರಷ್ಟು ಕೃಷಿ ಪ್ರಧಾನವಾದ ಮತ್ತು ಕೃಷಿಕರು ವಾಸಿಸುವ ಜಿಲ್ಲೆ. ಸುಮಾರು 20 ಲಕ್ಷ ಜನಸಂಖ್ಯೆಯಿದೆ. ಈ ಪೈಕಿ 4 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಕೃಷಿ ಮತ್ತು ಜಾನುವಾರುಗಳ ಸಾಕಣೆಯಲ್ಲಿ ತೊಡಗಿದ್ದಾರೆ. ಹೊಸ ಉದ್ಯಮದ ಪ್ರಾರಂಭ ಮಾಡಿದಾಗ ಸ್ವಲ್ಪ ಕಷ್ಟವಾಗುತ್ತದೆ. ಉತ್ಪಾದಕ ಕಂಪನಿಗಳನ್ನು ಸಂಪರ್ಕಿಸಿದರೆ ನಿಮ್ಮ ಉದ್ಯಮ ಉತ್ತಮ ರೀತಿಯಲ್ಲಿ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಉದ್ಯೋಗಕ್ಕಾಗಿ ಎಲ್ಲರೂ ಬೆಂಗಳೂರಿಗೆ ಹೋಗುತ್ತಾರೆ. ಆದರೆ, ರತ್ನಜ ಅವರು ಬೆಂಗಳೂರಿನಿಂದ ಹುಟ್ಟೂರಿಗೆ ವಾಪಾಸಾಗಿ ಕೃಷಿಯಲ್ಲಿ ತೊಡಗಿದ್ದಾರೆ. ಹೊಸ ಮಂಡ್ಯ ನಿರ್ಮಾಣ ಪ್ರಯತ್ನ ನಡೆದಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 1,000 ಕೋಟಿ ರೂ ವೆಚ್ಚದ ಕಾಮಗಾರಿಗಳು ನಡೆಯುತ್ತಿದೆ. ಮಂಡ್ಯದ ಚಿತ್ರಣ ಬದಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಮಂಡ್ಯಗೆ ಮಲ್ಟಿಫೆಕ್ಸ್ ಕೂಡ ಬರುತ್ತಿದೆ. ವಿವಿಧ ಕಂಪನಿಗಳು ಮಂಡ್ಯಗೆ ಆಗಮಿಸುತ್ತಿವೆ. ದುಡಿಯುವ ಕೈಗಳಿಗೆ ಉದ್ಯೋಗ ಸಿಗುತ್ತಿದೆ. ರತ್ನಜ ಅವರಂತೆ ಹೊಸ ಉದ್ಯಮ ಆರಂಭಿಸುವವರಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಹಂಸಲೇಖ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಬರಹಗಾರ ಜೋಗಿ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಚ್.ಪಿ.ಮಹೇಶ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಯ್ಯ, ವಕೀಲ ಹನಕೆರೆ ಶಿವರಾಮು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ, ಪ್ರಗತಿಪರ ರೈತ ಹನಕೆರೆ ರತ್ನಜ ಇತರರಿದ್ದರು.