ಬೆಳಗಾವಿ: ಛತ್ತೀಸ್‌ಗಢ ಮೂಲದ ಏಳು ಕಾರ್ಮಿಕರಿಗೆ ಅಂತೂ ‘ಜೀತ’ದ ನರಕ ಯಾತನೆಯಿಂದ ಮುಕ್ತಿ ಸಿಕ್ಕಿದೆ. ಕೊಳವೆಬಾವಿ ಕೊರೆಯುವ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರು, ಮಂಗಳವಾರ ರಾತ್ರಿ ಬೆಳಗಾವಿಯಿಂದ ರೈಲಿನ ಮೂಲಕ ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಏನಿದು ಪ್ರಕರಣ?: ಸವದತ್ತಿ ತಾಲೂಕಿನ ಯರಗಟ್ಟಿಯ ಕೊಳವೆಬಾವಿ ಕೊರೆಯಿಸುವ ಕಂಪನಿ ಮಾಲೀಕ ರೊಬ್ಬರು ಛತ್ತೀಸ್‌ಗಢದ ಪ್ರಗೇಶ ಗಾವಡೆ, ರಾಜಲಾಲ್ ಕುಮತಿ, ದಶರಥ ಕುಮಾರ ಕೋಟಾಯಿ, ಅಂತುರಾಮ ನೇತಂ, ಚನ್ನುರಾಮ ಬುದ್ರಾಮ್ ಹಾಗೂ ಇಬ್ಬರು ಅಪ್ರಾಪ್ತರನ್ನು ಕೆಲಸಕ್ಕಾಗಿ ಕರೆಯಿಸಿದ್ದರು. ಅವರಿಗೆ ಮೂಲಸೌಕರ್ಯದ ಜತೆಗೆ, ಮಾಸಿಕ 9 ಸಾವಿರದಿಂದ 15 ಸಾವಿರ ರೂ. ವೇತನ ನೀಡುವುದಾಗಿ ತಿಳಿಸಿದ್ದರು.
ಠಾಣೆಯಲ್ಲಿ ದೂರು: ಕಾರ್ಮಿಕರಿಗೆ 6-7 ತಿಂಗಳಿಂದ ವೇತನ, ಭರವಸೆಯಂತೆ ಮೂಲಸೌಕರ್ಯ ಒದಗಿಸದೇ, ಲಾಕ್‌ಡೌನ್ ಅವಧಿಯಲ್ಲಿ ಅವರಿಗೆ ಊರಿಗೆ ಹೋಗಲೂ ಬಿಡದ ವಿಚಾರ
ಬೆಳಗಾವಿಯ ಸ್ಪಂದನ ಸಂಸ್ಥೆಯ ನಿರ್ದೇಶಕಿ ವಿ.ಸುಶೀಲಾ ಗಮನಕ್ಕೆ ಬಂತು. ಕಾರ್ಮಿಕರ ಹೀನಾಯ ಸ್ಥಿತಿ ಅರಿತ ಅವರು, ಕೆಲಸಕ್ಕೆ ಇಟ್ಟುಕೊಂಡಿರುವ ಏಳು ಕಾರ್ಮಿಕರನ್ನು ‘ಜೀತದಾಳು’ ಎಂದು ಪರಿಗಣಿಸಬೇಕು. ಅನ್ಯಾಯಕ್ಕೆ ಒಳಗಾದವರಿಗೆ ರಕ್ಷಣೆ ನೀಡಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು 2020ರ ಜು. 17ರಂದು ಮುರಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಾದ ಹಿನ್ನೆಲೆಯಲ್ಲಿ ಕಾರ್ಮಿಕ, ಕಂದಾಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕಾರ್ಮಿಕರನ್ನು ರಕ್ಷಿಸಿ, ಬೈಲಹೊಂಗಲದಲ್ಲಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆ.10ರಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರು ಏಳು ಕಾರ್ಮಿಕರ ವಿಚಾರಣೆ ನಡೆಸಿದ್ದು, ಅವರನ್ನು ‘ಜೀತ ಕಾರ್ಮಿಕರು’ ಎಂದು ಆದೇಶ ಹೊರಡಿಸಿದ್ದಾರೆ. ‘ಏಳು ಕಾರ್ಮಿಕರಿಗೆ ಜೀತದಿಂದ ವಿಮುಕ್ತಿಯಾದ ಪ್ರಮಾಣಪತ್ರ ವಿತರಿಸಿ, ಅವರ ಊರಿಗೆ ಕಳುಹಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಕಂದಾಯ, ಕಾರ್ಮಿಕ ಮತ್ತು ಪೊಲೀಸ್ ಸಿಬ್ಬಂದಿಯನ್ನೂ ಅವರೊಂದಿಗೆ ಕಳುಹಿಸಲಾಗಿದೆ. ಕಾರ್ಮಿಕರ ಬ್ಯಾಂಕ್ ವಿವರ ಕಲೆಹಾಕುತ್ತಿದ್ದು, ಸರ್ಕಾರದಿಂದ 20 ಸಾವಿರ ರೂ. ಪರಿಹಾರ ವಿತರಿಸಲಾಗುವುದು. ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕನಿಷ್ಠ ವೇತನ ಕಾಯ್ದೆ ಮತ್ತು ಕಿಶೋರಕಾರ್ಮಿಕ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಕೊಳವೆಬಾವಿ ಕೊರೆಯುವ ಕಂಪನಿ ಮಾಲೀಕನ ವಿರುದ್ಧ ಸವದತ್ತಿ ವೃತ್ತದ ಕಾರ್ಮಿಕ ನಿರೀಕ್ಷಕರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಕಾರ್ಮಿಕರಿಗೆ 6.09 ಲಕ್ಷ ರೂ. ವೇತನ ನೀಡುವುದು ಬಾಕಿ ಇದ್ದು, ಆ. 20ರಂದು ನಮ್ಮ ಕಚೇರಿಯಲ್ಲೇ ಮಾಲೀಕನ ವಿಚಾರಣೆ ನಡೆಯಲಿದೆ.| ವೆಂಕಟೇಶ ಶಿಂದಿಹಟ್ಟಿ ಉಪ ಕಾರ್ಮಿಕ ಆಯುಕ್ತ, ಕಾರ್ಮಿಕ ಇಲಾಖೆ, ಬೆಳಗಾವಿಕೊಳವೆಬಾವಿ ಕೊರೆಯುವ ಕಂಪನಿಯಲ್ಲಿ ಕೆಲಸ ಮಾಡುವ ವೇಳೆ, ಹೆಜ್ಜೆ ಹೆಜ್ಜೆಗೂ ಕಷ್ಟ ಅನುಭವಿಸಿದ್ದೇವೆ. ನಮ್ಮ ರಕ್ಷಣೆಗೆ ಶ್ರಮಿಸಿದ ಅಧಿಕಾರಿಗಳು ಮತ್ತು ಸ್ಪಂದನ ಸಂಸ್ಥೆಗೆ ಕೃತಜ್ಞರಾಗಿದ್ದೇವೆ. ನಮ್ಮೂರಿಗೆ ತೆರಳಿ ಹೋಂ ಕ್ವಾರಂಟೈನ್ ಆಗುತ್ತೇವೆ. ನಂತರ, ಅಲ್ಲಿಯೇ ಕೂಲಿ ಮಾಡಿ ಬದುಕು ಕಟ್ಟಿಕೊಳ್ಳುತ್ತೇವೆ.| ಜೀತದಿಂದ ಮುಕ್ತರಾದ ಕಾರ್ಮಿಕರು
| ಇಮಾಮಹುಸೇನ್ ಗೂಡುನವರ ಬೆಳಗಾವಿ