ವಿಜಯಪುರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಕೇಂದ್ರದ ಭದ್ರತಾ ವೈಫಲ್ಯವೇ ಕಾರಣ ಎಂದು ಕೆಪಿಸಿಸಿ ವಕ್ತಾರ ಹಾಗೂ ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಆರೋಪಿಸಿದರು.
ಕಳೆದ 11 ವರ್ಷಗಳಿಂದ ಕಾಶ್ಮೀರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೂ ಉಗ್ರ ದಾಳಿ ಹತ್ತಿಕ್ಕುವಲ್ಲಿ ಆಗುತ್ತಿರುವ ವಿಫಲತೆ ಕೊನೆಗೊಂಡಿಲ್ಲ. ಆರು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ತನಿಖೆ ಪೂರ್ಣಗೊಳಿಸಿ ಕಠಿಣ ಕ್ರಮ ಕೈಗೊಂಡಿದ್ದರೆ ಇದೀಗ ಇಂಥ ಪ್ರಕರಣ ಮರುಕಳಿಸುತ್ತಿರಲಿಲ್ಲ. ಹೀಗಾಗಿ ಅಮಾಯಕರ ಸಾವಿಗೆ ಕೇಂದ್ರದ ಗುಪ್ತಚರ ಇಲಾಖೆ ಹಾಗೂ ಭದ್ರತಾ ಇಲಾಖೆಯ ವೈಫಲ್ಯವೇ ಕಾರಣ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಉಗ್ರರ ದಾಳಿ ಪೂರ್ವ ನಿಯೋಜಿಯ ಕೃತ್ಯ ಎನ್ನಿಸುತ್ತದೆ. ಕಾಶ್ಮೀರದಲ್ಲಿ ನಿಗದಿಯಾಗಿದ್ದ ಪ್ರಧಾನಿ ಮೋದಿ ಪ್ರವಾಸ ಏಕಾಏಕಿ ಮೊಟಕುಗೊಳಿಸಲಾಗಿದೆ. ಇತ್ತ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದರೆ ಅತ್ತ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾದಲ್ಲಿ ಮುಸ್ಲಿಂರ ಆಲಿಂಗನ ಮಾಡಿಕೊಳ್ಳುತ್ತಾರೆ. ಈ ಹಿಂದೆ ಪುಲ್ವಾಮಾ ದಾಳಿಯಾದಾಗಲೂ ಅಷ್ಟೆ-ಪ್ರಧಾನಿ ಮೋದಿ ಯಾವುದೋ ಕಾಡಿನಲ್ಲಿ ವನ್ಯಜೀವಿಗಳ ಫೋಟೊ ಕ್ಲಿಕ್ಕಿಸುತ್ತಿದ್ದರು. ರೋಮ್ ಹೊತ್ತಿ ಉರಿಯುತ್ತಿದ್ದಾಗ ಅಲ್ಲಿನ ರಾಜ ಪಿಟೀಲು ಬಾರಿಸುತ್ತಿದ್ದಂತೆ ಆಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೋವಲ್‌ನ ಪುತ್ರನೇ ಪಾಕಿಸ್ತಾನಕ್ಕೆ ವಿದ್ಯುತ್ ಪೂರೈಕೆ ಮಾಡುವ ಗುತ್ತಿಗೆ ಪಡೆದಿದ್ದಾರೆ. ಇಂಥವರಿಂದ ಭದ್ರತೆ ನಿರೀಕ್ಷಿಸುವುದಾದರೂ ಹೇಗೆ ಎಂದರು.
ಉಗ್ರರು ದಾಳಿ ವೇಳೆ ಜಾತಿ-ಧರ್ಮ ಕೇಳಿದರೆಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಉಗ್ರರಿಗೆ ಜಾತಿ ಇದೆಯೇ? ಧರ್ಮ ಇದೆಯೇ? ಅವರದ್ದು ಉಗ್ರರ ಜಾತಿ. ನಿಜಕ್ಕೂ ದಾಳಿಕೋರರು ಧರ್ಮ ಗುರುತಿಸಿ ಹೊಡೆಯುವುದೇ ಆಗಿದ್ದರೆ ಮುಸ್ಲಿಂ ವ್ಯಕ್ತಿಯನ್ನೂ ಕೊಂದರಲ್ಲ ಅದಕ್ಕೇನೆಂದು ವ್ಯಾಖ್ಯಾನಿಸುತ್ತೀರಿ? ಉಗ್ರರು ಯಾರೇ ಆದರೂ ಅವರನ್ನು ಗುಂಡಿಕ್ಕಿ ಕೊಲ್ಲಬೇಕು. ಉಗ್ರರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರಿಗೆ ಮತ್ತೊಮ್ಮೆ ಆಗ್ರಹಿಸುತ್ತೇವೆ. ಪಾಕಿಸ್ತಾನದ ವಿರುದ್ಧ ಕೂಡಲೇ ಯುದ್ಧ ಸಾರಿ. ಈ ಹಿಂದೆ ಇಂದಿರಾಗಾಂಧಿ ಯುದ್ದ ಮಾಡಿದ ರೀತಿ ಉಗ್ರರನ್ನು ಮಟ್ಟ ಹಾಕಿ ಎಂದರು.
ಮುಖಂಡ ಡಾ.ರವಿ ಬಿರಾದಾರ ಮಾತನಾಡಿ, ಉಗ್ರರು ಜಾತಿ ಧರ್ಮ ಕೇಳಿ ಗುಂಡು ಹೊಡೆದಿದ್ದರೆ ಅದೊಂದು ಪಾಕಿಸ್ತಾನದ ಷಡ್ಯಂತ್ರವೇ ಆಗಿರಲಿದೆ. ಏನೇ ಆಗಲಿ ಉಗ್ರರನ್ನು ಸದೆ ಬಡಿದು ಮೃತರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ತಕ್ಷಣ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಮುಖಂಡ ಎಂ.ಸಿ. ಮುಲ್ಲಾ ಮಾತನಾಡಿ, ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಭದ್ರತಾ ವೈಫಲ್ಯ ಮುಚ್ಚಿಹಾಕಲು ಧರ್ಮವನ್ನು ಮುನ್ನೆಲೆಗೆ ತರುತ್ತಿವೆ. ಅದನ್ನು ಬಿಟ್ಟು ಭದ್ರತಾ ವೈಫಲ್ಯದ ಬಗ್ಗೆ ಮಾತನಾಡಲಿ ಎಂದರು.
ದಲಿತ ಮುಖಂಡ ನಾಗರಾಜ ಲಂಬು ಮತ್ತಿತರರಿದ್ದರು.