ಜಿಲ್ಲೆ

ತೊರೆಯಿಂದ ಕರೆಂಟ್ ಉತ್ಪಾದನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮನೆ ಪಕ್ಕದಲ್ಲಿ ಚಿಕ್ಕದೊಂದು ತೊರೆ ಇದ್ದರೆ ಸಾಕು, ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಜಿಲ್ಲೆಯ ಹಲವೆಡೆ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ತಂತ್ರಜ್ಞಾನದ ಕಿರು ಜಲವಿದ್ಯುತ್ ಘಟಕಗಳು ಒಂದೊಂದು ಕುಟುಂಬದ ಅಗತ್ಯತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿವೆ. ಮಳೆಗಾಲದಲ್ಲಿ ತಿಂಗಳುಗಟ್ಟಲೆ ಸೆಸ್ಕ್‌ನ ವಿದ್ಯುತ್ ಪೂರೈಕೆ ಇಲ್ಲದಿದ್ದರೂ ಇಂಥ ಮನೆಗಳಲ್ಲಿ ಬಲ್ಬ್ ಆರುವುದೇ ಇಲ್ಲ.

ಬೆಟ್ಟ-ಗುಡ್ಡಗಳಿಂದ ಕೂಡಿರುವ ಕೊಡಗಿನ ಗ್ರಾಮೀಣ ಪ್ರದೇಶಗಳಿಗೆ ಇತ್ತೀಚಿನ ಕೆಲ ವರ್ಷಗಳ ತನಕವೂ ಸರ್ಕಾರದ ವಿದ್ಯುತ್ ಸಂಪರ್ಕ ದೂರದ ಮಾತೇ ಆಗಿತ್ತು. ಕಿಮೀ ಅಂತರದಲ್ಲಿ ಬೆಟ್ಟಗಳ ಮೇಲೆ ಅಲ್ಲೊಂದು, ಇಲ್ಲೊಮದು ಇರುವ ಮನೆಗಳು, ವಿದ್ಯುತ್ ಕಂಬ ಸೇರಿದಂತೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲು ಅಡ್ಡಿಯಾಗಿದ್ದ ಕಡಿದಾದ ದಾರಿಗಳು, ಮನೆಗಳನ್ನು ಸುತ್ತುರಿದಂತೆ ಇದ್ದ ದಟ್ಟ ಕಾಡು, ವರ್ಷದ ಬಹುತೇಕ ದಿನಗಳಲ್ಲಿ ಮಳೆಯಿಂದ ಕೂಡಿರುತ್ತಿದ್ದ ಜಾಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದ ಸಿಬ್ಬಂದಿ ಹೀಗೆ ಅನೇಕ ಕಾರಣಗಳಿಂದ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಸಾಧ್ಯವಾದ ಪರಿಸ್ಥಿತಿ ಇತ್ತು. ಇಂಥ ಸಂದರ್ಭದಲ್ಲಿ ಗ್ರಾಮೀಣರ ಮನೆ ಬೆಳಗಿದ್ದು ಸ್ಥಳೀಯ ತಂತ್ರಜ್ಞಾನದ ಕಿರು ಜಲ ವಿದ್ಯುತ್ ಘಟಕಗಳು.

ಸೆಸ್ಕ್ ವಿದ್ಯುತ್ ತಲುಪದ ಕೊಡಗಿನ ಗ್ರಾಮೀಣ ಪ್ರದೇಶಗಳಿಗೆ ನಾಲ್ಕು ದಶಕಗಳ ಹಿಂದೆಯೇ ಕಿರು ಜಲವಿದ್ಯುತ್ ಘಟಕಗಳು ಪರಿಚಯವಾಗಿದ್ದವು. ಭಾಗಮಂಡಲ, ಕರಿಕೆ, ನಾಪೋಕ್ಲು, ಕುಟ್ಟ ಸೇರಿದಂತೆ ಕೇರಳಕ್ಕೆ ಸಮೀಪ ಇರುವ ಊರುಗಳಲ್ಲಿನ ಬೆಟ್ಟಪ್ರದೇಶಗಳಲ್ಲಿನ ಮನೆಗಳಲ್ಲಿ ನೀರಿನಿಂದ ವಿದ್ಯುತ್ ತಯಾರಿಸುವ ಪ್ರಯೋಗ ಯಶಸ್ವಿಯಾಗಿ ನಡೆದಿತ್ತು. ನಂತರದ ದಿನಗಳಲ್ಲಿ ಜಿಲ್ಲೆಯ ಇತರ ಗ್ರಾಮೀಣ ಪ್ರದೇಶಗಳಿಗೂ ಇದು ವಿಸ್ತರಣೆ ಆಯಿತು. ಕೇರಳದ ತಂತ್ರಜ್ಞರು ಸ್ಥಳೀಯ ತಂತ್ರಜ್ಞಾನ ಮತ್ತು ಸಂಪನ್ಮೂಲ ಬಳಸಿಕೊಂಡು ಕಿರು ಜಲವಿದ್ಯುತ್ ಉತ್ಪಾದನಾ ಘಟಕಗಳನ್ನು ಗ್ರಾಮೀಣರಿಗೆ ಅಳವಡಿಸಿಕೊಟ್ಟಿದ್ದರು. ಭೌತವಿಜ್ಞಾನದ ಮೂಲ ಅಂಶಗಳ ಆಧಾರದಲ್ಲಿ ಸರಳ ತಾಂತ್ರಿಕತೆಯಿಂದ ಈ ವಿದ್ಯುತ್ ಉತ್ಪಾದನಾ ಘಟಕಗಳನ್ನು ತಯಾರಿಸಿ ಕೊಡಲಾಗುತ್ತಿತ್ತು.

ತಾಂತ್ರಿಕತೆ ಅಷ್ಟೊಂದು ಸುಧಾರಿಸದ ಆರಂಭದ ದಿನಗಳಲ್ಲಿ ಒಂದು ಬಲ್ಬ್ ಉರಿಸಲು ಸಾಕಾಗುವಷ್ಟು ವಿದ್ಯುತ್ ಇಂಥ ಘಟಕಗಳಿಂದ ಲಭ್ಯವಾಗುತ್ತಿತ್ತು.ಮನೆಯ ಬಳಿ ಚಿಕ್ಕದಾಗಿ ಹರಿಯುವ ತೊರೆ ಅಥವಾ ಸಮೀಪದ ಬೆಟ್ಟದ ಮೇಲಿನಿಂದ ಗುರುತ್ವಾಕರ್ಷಣೆ ಮೂಲಕ ಪೈಪ್‌ನಲ್ಲಿ ರಭಸವಾಗಿ ಹರಿದು ಬರುವ ನೀರಿನ ಮೂಲ ಇದ್ದರೆ ಸಾಕು, ಆ ನೀರನ್ನು ಹರಿಸಿ ಟರ್ಬೈನ್ ತಿರುಗುವಂತೆ ಮಾಡಿ, ಇದನ್ನು ಡೈನಾಮೋಕ್ಕೆ ಸಂಪರ್ಕಿಸುತ್ತಿದ್ದ ಕೇರಳದ ತಂತ್ರಜ್ಞರು ಚಿಕ್ಕದೊಂದು ವಿದ್ಯುತ್ ಉತ್ಪಾದನಾ ಘಟಕ ಸಿದ್ಧಪಡಿಸಿ ಮನೆಗೆ ಬೆಳಕು ಹರಿಸುತ್ತಿದ್ದರು. ಘಟಕಗಳ ನಿರ್ಮಾಣ ವೆಚ್ಚ ಆಗ ಅಧಿಕವಾಗಿದ್ದರೂ ಸರ್ಕಾರದ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳು ಮಾತ್ರವಲ್ಲದೆ ನೀರಿನ ಅನುಕೂಲತೆ ಇದ್ದ ಗ್ರಾಮೀಣ ಪ್ರದೇಶದ ಮನೆಗಳ ಬಳಿಯೂ ಇಂಥದ್ದೊಂದು ಘಟಕಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು.

ಕೊಡಗಿನಲ್ಲಿ ಮಳೆಗಾಲ ಆರಂಭವಾದರೆ ಸಾಮಾನ್ಯವಾಗಿ ಸದ್ಯಕ್ಕೆ ನಿಲ್ಲುವುದಿಲ್ಲ. ಇಂಥ ಸಂದರ್ಭದಲ್ಲಿ ಬಿಟ್ಟೂ ಬಿಡದೆ ಸುರಿವ ಮಳೆ, ವೇಗವಾಗಿ ಬೀಸುವ ಗಾಳಿ, ಮುರಿದು ಬೀಳುವ ಮರಗಳು, ವಿದ್ಯುತ್ ಕಂಬಗಳು, ತುಂಡಾಗುವ ವಿದ್ಯುತ್ ತಂತಿಗಳು ಹೀಗೆ ಅನೇಕ ಕಾರಣಗಳಿಂದ ವಾರಗಟ್ಟಲೆ ವಿದ್ಯುತ್ ಸಂಪರ್ಕವೇ ಇರುವುದಿಲ್ಲ. ಹೀಗೆ ವಿದ್ಯುತ್ ಕೈ ಕೊಟ್ಟಾಗ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳ ಮನೆಗಳಿಗೆ ಬೆಳಕು ಕೊಡುತ್ತಿದ್ದಿದ್ದು ಈ ಕಿರು ಜಲ ವಿದ್ಯುತ್ ಘಟಕಗಳು. ಹಿಂದೊಮ್ಮೆ ವಿದ್ಯುತ್ ಸ್ವಾವಲಂಬನೆಗೆ ಸಹಕಾರಿಯಾಗಿದ್ದ ಇಂಥ ಘಟಕಗಳು ಈಗ ತುರ್ತು ಸಂದರ್ಭದಲ್ಲಿ ಗ್ರಾಮೀಣರಿಗೆ ನೆರವಾಗುತ್ತಿದೆ. ಟಿವಿ ನೋಡಲು, ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಹೀಗೆ ಸಣ್ಣ ಪುಟ್ಟ ಅಗತ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕಿರು ಜಲವಿದ್ಯುತ್ ಘಟಕಗಳ ತಾಂತ್ರಿಕತೆಯಲ್ಲಿ ಪ್ರಗತಿ ಆಗಿದೆ. ಒಂದು ಮನೆಯ ಸಂಪೂರ್ಣ ಉಪಯೋಗಕ್ಕೆ ಆಗುವಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ. ಸರ್ಕಾರದಿಂದ ಸಹಾಯಧನವೂ ಸಿಗುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಪಕ್ಕ ಹರಿವ ನೀರಿನ ವ್ಯವಸ್ಥೆ ಇರುವ ಸಾಕಷ್ಟು ಮಂದಿ ಇಂತಹ ಘಟಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದಾರೆ. ಈ ವಿದ್ಯುತ್ ಮಳೆಗಾಲದ ಸಂಕಷ್ಟದ ಸಮಯದಲ್ಲಿ ಮನೆ ಬೆಳಗುತ್ತಿದೆ.

ಕನಿಷ್ಠ ೧೫ ಅಡಿ ಎತ್ತರದಲ್ಲಿ ೨ ಅಂಗುಲ ವ್ಯಾಸದ ಕೊಳವೆಯಿಂದ ನೀರು ದೊರೆತರೆ ೧ ಕಿ.ವ್ಯಾ., ೫೦ ಅಡಿ ಎತ್ತರದಲ್ಲಿ ಇದೇ ಪ್ರಮಾಣದ ನೀರು ಇದ್ದರೆ ೨ ಕಿ.ವ್ಯಾ. ವಿದ್ಯುತ್ ಉತ್ಪಾದಿಸಬಹುದು. ಇಷ್ಟು ಪ್ರಮಾಣದ ವಿದ್ಯುತ್‌ನಿಂದ ಮನೆಯ ಸಾಮಾನ್ಯ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು. ನೀರಿನ ಹರಿಯುವಿಕೆಯ ಪ್ರಮಾಣದಲ್ಲಿ ವ್ಯತ್ಯಾಸ ಆದರೆ ವಿದ್ಯುತ್ ಉತ್ಪಾದನೆ ಕೂಡ ಏರುಪೇರಾಗುತ್ತದೆ. ನೀರಿನ ಕೊರತೆ ಆದಾಗ ಬೆಟ್ಟದ ಮೇಲ್ಭಾಗದ ಕೆರೆಯಿಂದ ಪೈಪ್ ಮೂಲಕ ನೀರು ಹಾಯಿಸಿ ಘಟಕ ಚಾಲೂ ಮಾಡಿ ಯಶಸ್ವಿಯಾದವರೂ ಇದ್ದಾರೆ.

ನಮ್ಮ ಮನೆಯಲ್ಲಿ ಸುಮಾರು ೩೦ ವರ್ಷಗಳ ಹಿಂದೆಯೇ ಕಿರು ಜಲ ವಿದ್ಯುತ್ ಘಟಕವನ್ನು ಅಳವಡಿಸಿಕೊಂಡಿದ್ದೇವೆ. ಸೆಸ್ಕ್‌ನ ವಿದ್ಯುತ್ ಸಂಪರ್ಕವೂ ಇದೆ. ನಮ್ಮ ಭಾಗದಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕದಲ್ಲಿ ಆಗಾಗ್ಗೆ ಸಮಸ್ಯೆ ಆಗುತ್ತದೆ. ಇಂಥ ಸಂದರ್ಭದಲ್ಲಿ ಮೊಬೈಲ್ ಚಾರ್ಜಿಂಗ್ ಸೇರಿದಂತೆ ತುರ್ತು ಅಗತ್ಯಗಳಿಗೆ ಈ ಜಲವಿದ್ಯುತ್ ಘಟಕ ಸಹಕಾರಿ ಆಗಿದೆ. ಇದಲ್ಲದೆ ಟಿವಿಗಳಿಗೆ, ಅಡುಗೆ ಕೆಲಸಕ್ಕೂ ಈ ವಿದ್ಯುತ್ ಬಳಸಿಕೊಳ್ಳುತ್ತೇವೆ. ಆರಂಭದಲ್ಲಿ ಸ್ವಲ್ಪ ಬಂಡವಾಳ ಜಾಸ್ತಿ ಬೇಕು. ನಂತರ ನಿರ್ವಹಣೆಗೆ ಅಂಥ ಸಮಸ್ಯೆಯೇನೂ ಆಗುವುದಿಲ್ಲ.

  • ರಾಕೇಶ್ ಗುಡ್ಡೆಮನೆ, ಮುಕ್ಕೋಡ್ಲು ಗ್ರಾಮ

ಕೊಡಗು ಬೆಟ್ಟ-ಗುಡ್ಡ ಹಾಗೂ ಅರಣ್ಯಗಳಿಂದ ಕೂಡಿರುವ ಜಿಲ್ಲೆಯಾಗಿದೆ. ಜತೆಗೆ ಇಲ್ಲಿ ಮಳೆಗಾಲದ ಅವಧಿಯೂ ಹೆಚ್ಚು. ಹಾಗಾಗಿ ಇಂಥ ಪ್ರದೇಶಕ್ಕೆ ಮಳೆಗಾಲದಲ್ಲಿ ಸೌರ ವಿದ್ಯುತ್ ಸರಿಯಾದ ಆಯ್ಕೆ ಅಲ್ಲ. ಇದರ ಬದಲು ಮನೆ ಪಕ್ಕದಲ್ಲಿ ಹರಿಯುವ ಜಲಮೂಲವಿದ್ದರೆ ಸುಲಭವಾಗಿ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಸಹಕಾರಿ ಆಗಿರುತ್ತದೆ. ನೀರಿನ ಲಭ್ಯತೆ ಇರುವಷ್ಟು ದಿನವೂ ಈ ಮೂಲಕ ಗುಣಮಟ್ಟದ ವಿದ್ಯುತ್ ಪಡೆಯಬಹುದಾಗಿದೆ.

  • ಶ್ರೀನಾಥ್, ಉಪನ್ಯಾಸಕ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಕುಶಾಲನಗರ