ಜಿಲ್ಲೆ

ಮುಂದಿನ ವರ್ಷವೇ ಸಾರ್ವತ್ರಿಕ ಚುನಾವಣೆ!?

ರೇಷ್ಮೆ ನಗರ ಡೆಸ್ಕ್

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ | ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ನನ್ನದೇ

ಬಿಡದಿ : ಕಾಂಗ್ರೆಸ್ ಸರ್ಕಾರ ಐದು ವರ್ಷ ಸಂಪೂರ್ಣವಾಗಿ ಅಧಿಕಾರ ಮಾಡಲ್ಲ. ಮುಂದಿನ ವರ್ಷವೇ ಸಾರ್ವತ್ರಿಕ ಚುನಾವಣೆ ಬಂದರೂ ಬರಬಹುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಚ್ಚರಿಯ ಮಾತುಗಳನ್ನು ಹೇಳಿದರು.
ಬಿಡದಿಯ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಶನಿವಾರ ಚನ್ನಪಟ್ಟಣ ಕ್ಷೇತ್ರದ ಪ್ರಮುಖ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಮುಂದಿನ ವಾರ ಚನ್ನಪಟ್ಟಣ ಉಪಚುನಾವಣೆಯ ದಿನಾಂಕ ಘೋಷಣೆಯಾಗುವ ಲಕ್ಷಣವಿದೆೆ. ಚನ್ನಪಟ್ಟಣ ನಿಮ್ಮ ಕ್ಷೇತ್ರ, ನಿಮ್ಮ ಸೀಟ್ ನಿಮಗೆ ಅಂತಿಮ. ಹಾಗಾಗಿ ಅಭ್ಯರ್ಥಿ ಆಯ್ಕೆಯ ನಿರ್ಣಯ ನಿಮ್ಮದು ಎಂದು ದೆಹಲಿ ಬಿಜೆಪಿ ನಾಯಕರು ಸ್ಪಷ್ಟವಾಗಿ ನನಗೆ ಹೇಳಿದ್ದಾರೆ ಎನ್ನುವ ಮೂಲಕ ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೆ ಪಿಕ್ಸ್ ಎನ್ನುವ ಸಂದೇಶವನ್ನು ರವಾನಿಸಿದರು.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾನು ತೀರ್ಮಾನ ಮಾಡುತ್ತೇನೆ. ಚುನಾವಣೆ ನಡೆಸೋದು ನನ್ನ ಜವಾಬ್ದಾರಿ. ನೀವು ಮನೆ ಮನೆ ಪ್ರಚಾರ ಮಾಡಿ ಸಾಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.


ಯಾರಿಗೂ ಮಾತು ಕೊಟ್ಟಿಲ್ಲ
ಲೋಕಸಭಾ ಚುನಾವಣೆಯಲ್ಲಿ ನಾನು ಮಂಡ್ಯದಿಂದ ಸ್ಪರ್ಧೆ ಮಾಡುವ ಸಮಯದಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಯಾರಿಗೂ ಬಿಟ್ಟುಕೊಡುವ ಮಾತು ಕೊಟ್ಟಿಲ್ಲ. ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಮಾತು ಕೊಟ್ಟಿದ್ದರು ಎಂಬ ಊಹಾಪೋಹಗಳಿಗೆ ಕಿವಿಗೊಡಬೇಡಿ. ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ವೇಳೆ ನೀವೇ ಎನ್‌ಡಿಎ ಅಭ್ಯರ್ಥಿಯಾಗಿ ಎಂದು ಯೋಗೇಶ್ವರ್ ಅವರಿಗೆ ಹೇಳಿದ್ದೆ ಹೊರತು ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಮಾತು ಕೊಟ್ಟಿರಲಿಲ್ಲ ಎಂದು ಸ್ಪಷ್ಟ ಪಡಿಸಿದರು.


ಹೇಗೆ ನಂಬಲಿ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್ ಅವರ ಚುನಾವಣಾ ಖರ್ಚು ಮಾಡಲು ಕೊಟ್ಟಿದ್ದ ಹಣವನ್ನು ಮಂಡ್ಯ ಕ್ಷೇತ್ರದಲ್ಲಿನ ನನ್ನ ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಿರುವ ಆ ವ್ಯಕ್ತಿಯನ್ನು (ಯೋಗೇಶ್ವರ್) ನಾನು ಹೇಗೆ ನಂಬಲಿ ಎಂದರು. ಒಂದು ವೇಳೆ ನೀವು ನಿಲ್ಲಲೇಬೇಕು ಎಂದು ತೀರ್ಮಾನ ಮಾಡಿದ್ದರೆ ಮೊದಲು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಎಂದು ಎರಡು ಮೂರು ಬಾರಿ ಹೇಳಿದ್ದೇನೆ, ಆ ಕೆಲಸವನ್ನು ಅವರು ಮಾಡಿಲ್ಲ. ಈ ಹಿಂದೆ ಇವರು ಶಾಸಕರಿದ್ದ ವೇಳೆ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರಿಗೆ ನೋವು ಕೊಟ್ಟಿದ್ದರು. ಹಾಗಾಗಿ ಅವರನ್ನು ಭೇಟಿ ಮಾಡಲು ತಿಳಿಸಿದ್ದೆ ಎಂದರು.


ಟ್ರಕ್‌ನಲ್ಲಿ ಹಣ ತಂದರೂ ಗೆಲ್ಲಲ್ಲ
ಉಪ ಮುಖ್ಯಮಂತ್ರಿಗಳು ಈಗಾಗಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಂಚಾರ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಮಾಡಿದರೆ ಡಿಕೆಶಿ ಟ್ರಕ್ ಗಟ್ಟಲೆ ಹಣ ತಂದು ಸುರಿದರೂ ಅವರ ಗೆಲುವು ಸಾಧ್ಯವಿಲ್ಲ. ಇದೀಗ ಅವರು ಅಭ್ಯರ್ಥಿ ಯಾರೆಂದರೆ ನಾನೆ ಅಭ್ಯರ್ಥಿ ಎನ್ನುತ್ತಾರೆ ಅಲ್ವಾ. ಅದೇ ರೀತಿ ನೀವು ನಮ್ಮ ಕುಮಾರಸ್ವಾಮಿ ಅವರೆ ಅಭ್ಯರ್ಥಿ ಎಂದು ಮತದಾರರ ಮುಂದೆ ಹೇಳಿ ಎಂದು ಕಾರ್ಯಕರ್ತರಿಗೆ ಸಚಿವರು ಕಿವಿ ಮಾತು ಹೇಳಿದರು.

ಮೂರು ಸಮುದಾಯಗಳನ್ನು ಟಾರ್ಗೆಟ್ ಮಾಡಿ
ಮುಂಬರುವ ಉಪ ಚುನಾವಣೆಯ ದೃಷ್ಟಿಯಿಂದ ಸಮುದಾಯಗಳನ್ನು ಪಕ್ಷದತ್ತ ಸೆಳೆಯಬೇಕು. ನಮ್ಮ ಪಕ್ಷದ ಅಭ್ಯರ್ಥಿ ಉಪ ಚುನಾವಣೆಯಲ್ಲಿ ನಿಲ್ಲಬೇಕು ಅಂದರೆ ತಾಲೂಕಿನ ಮೂರು ಸಮುದಾಯದವರನ್ನು ಸೆಳೆಯಬೇಕು. ತಾಲೂಕಿನಲ್ಲಿನ ತಿಗಳರು, ಬೆಸ್ತರು ಹಾಗೂ ದಲಿತ ಸಮಾಜದ ಬಂಧುಗಳನ್ನು ಟಾರ್ಗೆಟ್ ಮಾಡಿ ಆ ಸಮುದಾಯದ ಮುಖಂಡರನ್ನು ನಮ್ಮ ಪಕ್ಷದತ್ತ ಕರೆ ತರುವ ಕೆಲಸ ಮಾಡಬೇಕು ಎಂದು ಎಚ್‌ಡಿಕೆ ಸೂಚಿಸಿದರು.

ನಿಖಿಲ್ ಕ್ಷೇತ್ರದಲ್ಲಿ ಪ್ರವಾಸ
ಪಕ್ಷ ಸಂಘಟನೆಗೆ ನಿಖಿಲ್ ಅವರನ್ನು ಕ್ಷೇತ್ರಕ್ಕೆ ಕಳುಹಿಸಿದ್ದೆ, ಅಭ್ಯರ್ಥಿ ಮಾಡಲು ಅಲ್ಲ. ಈ ಕ್ಷಣದವರೆಗೂ ಅಂತಹ ನಿರ್ಧಾರ ಮಾಡಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘಟನೆಗಳು ಒಟ್ಟಾಗಿ ನಿಖಿಲ್ ಅವರನ್ನು ಸೋಲಿಸಿದರು ಎಂದು ಸಚಿವರು ಹೇಳಿದರು.