ಕಾನಹೊಸಹಳ್ಳಿ: ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಸಾಮಾನ್ಯ ಸಭೆಯನ್ನು 18 ಜನ ಸದಸ್ಯರು ಬಹಿಷ್ಕರಿಸುವ ಮೂಲಕ ಅಧ್ಯಕ್ಷ ಹಾಗೂ ಪಿಡಿಒ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು. 30 ಜನ ಸದಸ್ಯರ ಪೈಕಿ 11 ಜನ ಸಭೆಗೆ ಹಾಜರಿದ್ದರು. ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ ಅವರು ಗೈರಾಗಿದ್ದರು. ಹೀಗಾಗಿ ಕೊರಂ ಕೊರತೆಯಿಂದ ಸಭೆ ಮುಂದೂಡಲಾಯಿತು.
ಅಧ್ಯಕ್ಷ ಎ.ಸಿ.ಚೇತನ್ ಅವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಮ್ಮ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸೇರಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಇದರಿಂದ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ಅಧ್ಯಕ್ಷರ ಗಮನಕ್ಕೆ ತಂದರೆ ಪಿಡಿಒ ಹೆಸರು ಹೇಳುವುದು.
ಪಿಡಿಒಗೆ ಕೇಳಿದರೆ ಅಧ್ಯಕ್ಷರಿಗೆ ವಿಚಾರಿಸಿ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಸದಸ್ಯರ ಅಹವಾಲು, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡದೇ ಹೀಗೆ ವರ್ತಿಸಿದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುವುದು ಎಂದು ಸದಸ್ಯರಾದ ನೀಲಮ್ಮ ಬೊಮ್ಮಯ್ಯ, ಸಿದ್ದನಗೌಡ್ರು, ರಮೇಶ್, ಶಿವಕುಮಾರ್, ರಂಗನಾಥನಹಳ್ಳಿ ಕಲ್ಲೇಶ್, ವನಜಾಕ್ಷಿ ಅಜ್ಜಣ್ಣ, ಲಕ್ಷ್ಮೀ, ಗೌರಮ್ಮ ರೇವಣ್ಣ, ಕಲಾವತಿ, ಅಂಜಿನಮ್ಮ, ರೇಣುಕಮ್ಮ, ಗಂಗಮ್ಮ, ತಿಪ್ಪಣ್ಣ, ಮಕ್ಬುಲ್ ಸಾಬ್, ಹೊನ್ನೂರು ಸ್ವಾಮಿ, ಬೋರಪ್ಪ ಎಚ್ಚರಿಸಿದರು.
ಈ ಕುರಿತು ಅಧ್ಯಕ್ಷ ಚೇತನ್ ಪ್ರತಿಕ್ರಿಯಿಸಿ, ಸಾಮಾನ್ಯ ಸಭೆಗೆ ಎಲ್ಲರಿಗೂ ನೋಟಿಸ್ ನೀಡಿದ್ದೇವೆ. ಕರೆ ಮಾಡಿಯೂ ತಿಳಿಸಿದ್ದೇವೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. 15ನೇ ಹಣಕಾಸು ಯೋಜನೆಯಡಿ ಪ್ರತಿ ವಾರ್ಡ್‌ಗೆ ಹಣ ಮೀಸಲಿಟ್ಟದ್ದೇವೆ. ಸದಸ್ಯರು ಸಭೆಗೆ ಬಂದಿದ್ದರೆ ಚರ್ಚಿಸಬಹುದಿತ್ತು ಎಂದು ತಿಳಿಸಿದರು.