ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ನಿವೇಶನಕ್ಕೆ ಕಾದಿರಿಸಿದ್ದ ಜಾಗದ ಪಕ್ಕದಲ್ಲೇ ಖಾಲಿಯಿದ್ದ ಸರ್ಕಾರಿ ಜಾಗವನ್ನು ನಿಯಮ ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ 94ಸಿಯಲ್ಲಿ ಮಂಜೂರಾತಿ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿ ಸದಸ್ಯರ ಒತ್ತಾಯದಂತೆ ಮಂಜೂರಾತಿ ಆದೇಶ ರದ್ದುಗೊಳಿಸಿ ಜಾಗವನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಬೇಕೆಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲು ಬಜತ್ತೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಪಂಚಾಯಿತಿ ಅಧ್ಯಕ್ಷ ಗಂಗಾಧರ ಪಿ.ಎನ್.ನೆಕ್ಕರಾಜೆ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಬೆದ್ರೋಡಿಯಲ್ಲಿ ಮನೆ ನಿವೇಶನಕ್ಕೆ ಕಾದಿರಿಸಿದ್ದ ಜಾಗದ ಪಕ್ಕದಲ್ಲೇ ಇದ್ದ ಖಾಲಿ ಜಾಗವನ್ನು ಅಲ್ಲಿ ಮನೆ ಇಲ್ಲದೆ ಇದ್ದರೂ ನಿಯಮ ಉಲ್ಲಂಘಿಸಿ 94ಸಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ. ಈ ಜಾಗವನ್ನು ಗ್ರಾ.ಪಂ ಗೆ ಹಸ್ತಾಂತರ ಮಾಡುವಂತೆ ನಾಲ್ಕೈದು ವರ್ಷಗಳ ಹಿಂದೆಯೇ ತಹಸೀಲ್ದಾರ್‌ಗೆ ಗ್ರಾ.ಪಂ ನಿಂದ ಪತ್ರ ಬರೆಯಲಾಗಿತ್ತು. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಿಂದ 40 ಮೀ. ದೂರದಲ್ಲಿಯೂ ಇಲ್ಲ. ನಿಯಮ ಉಲ್ಲಂಘಿಸಿ ಜಾಗ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಪತ್ರ ಬರೆಯಬೇಕೆಂದು ಸದಸ್ಯರು ಆಗ್ರಸಿದರು.
ಮನೆ ಹಾಗೂ ಇತರ ಕಟ್ಟಡ ಬಾಡಿಗೆ ಪಡೆದುಕೊಂಡವರು ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಕಟ್ಟಡದ ಮಾಲೀಕರೇ ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ನೋಟಿಸ್ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬೆದ್ರೋಡಿಯಲ್ಲಿ ನಿಷ್ಪ್ರಯೋಜಕವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ತೆರವುಗೊಳಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಲಕ್ಷಾಂತರ ರೂ. ವೆಚ್ಚದಲ್ಲಿ ಹಲವು ವರ್ಷಗಳ ಹಿಂದೆ ಘಟಕ ನಿರ್ಮಾಣಗೊಂಡಿದ್ದರೂ ಒಮ್ಮೆಯೂ ಇದರ ಬಳಕೆಯಾಗಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ವಿಮಲ, ಸದಸ್ಯರಾದ ಮೋನಪ್ಪ ಗೌಡ, ರತ್ನಾ, ಪ್ರೆಸಿಲ್ಲ ಡಿಸೋಜ, ನಝೀರ್ ಬೆದ್ರೋಡಿ, ಉಮೇಶ ಓಡ್ರಪಾಲು, ಸ್ಮಿತಾ, ಮಾಧವ ಪೂಜಾರಿ, ಗಂಗಾಧರ ಕೆ.ಎಸ್, ಯಶೋದಾ, ಸಂತೋಷ್‌ಕುಮಾರ್, ಪ್ರೇಮಾ, ಭಾಗೀರಥಿ ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಪಿಡಿಒ ಚಂದ್ರಮತಿ ಸ್ವಾಗತಿಸಿದರು. ಸಿಬ್ಬಂದಿ ರಮೇಶ್, ಮಹಮ್ಮದ್, ಮಮತಾ, ಮೀನಾಕ್ಷಿ ಸಹಕರಿಸಿದರು.
ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆಯದೆ ಗ್ರಾ.ಪಂ ರಸ್ತೆಗೆ ಹೊಂದಿಕೊಂಡೇ ಕೆಲವು ಕಡೆಗಳಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕೊಳವೆಬಾವಿಗೆ ನಿರಾಕ್ಷೇಪಣಾ ಪತ್ರ ನೀಡುವ ಸಂದರ್ಭ ಕೊಳವೆಬಾವಿಯ ಪಕ್ಕದಲ್ಲಿ ಜಲಮರುಪೂರಣ ಘಟಕ ಕಡ್ಡಾಯಗೊಳಿಸಬೇಕು. ಅಲ್ಲದೆ ಈ ಹಿಂದೆ ಕೊಳವೆಬಾವಿ ಕೊರೆದಿರುವವರೂ ಜಲಮರುಪೂರಣ ಘಟಕ ನಿರ್ಮಿಸುವಂತೆ ಸೂಚನೆ ನೀಡಬೇಕೆಂದು ಸದಸ್ಯ ಉಮೇಶ್ ಓಡ್ರಪಾಲು ಒತ್ತಾಯಿಸಿದರು.
ಬಜತ್ತೂರು ಗ್ರಾಮಕ್ಕೆ ರಸ್ತೆ ಸೇರಿ ವಿವಿಧ ಕಾಮಗಾರಿಗಳಿಗೆ ಶಾಸಕರ ಮೂಲಕ 60.25 ಲಕ್ಷ ರೂ. ಅನುದಾನ ಬಂದಿದೆ. ಕಾಮಗಾರಿ ಆರಂಭಿಸುವ ಮುನ್ನ ಆಯಾ ವಾರ್ಡ್‌ನ ಸದಸ್ಯರ ಗಮನಕ್ಕೆ ತರಬೇಕೆಂದು ಒತ್ತಾಯ ಕೇಳಿ ಬಂತು. ಬೆದ್ರೋಡಿಯಲ್ಲಿ ಜಲ್ಲಿ ಮಿಕ್ಸಿಂಗ್ ಘಟಕ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದು, ಅದರ ವಿರುದ್ದ ಕ್ರಮ ಕೈಗೊಳ್ಳಲು ಸದಸ್ಯರು ಆಗ್ರಹಿಸಿದರು.