ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಗೊಬ್ಬರ, ಔಷಧಿ ಹಾಗೂ ಇನ್ನಿತರೆ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಪೂರೈಸುತ್ತಾ ರೈತರ ಬೆನ್ನೆಲುಬಿಗೆ ಸಹಕಾರ ಸಂಘಗಳು ನಿಂತಿವೆ, ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳು ರೈತರ ಬೆನ್ನೆಲುಬು ಎನ್ನಬಹುದು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ದೇವನಹಳ್ಳಿ ಟೌನ್‌ನಲ್ಲಿ ದೇವನಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾದ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಹಕಾರ ಸಂಘಗಳು ರೈತರಿಗೆ ಗೊಬ್ಬರ, ಔಷಧಿ, ಸಾಲಸೌಲಭ್ಯ, ವಿವಿಧ ಸವಲತ್ತುಗಳನ್ನು ಸಕಾಲದಲ್ಲಿ ನೀಡಿ ಅವರ ಅಭಿವೃದ್ಧಿಗೆ ಕಾರಣವಾಗಿದೆ. ರೈತರಿಗೆ ಬಹಳಷ್ಟು ಅನುಕೂಲ ಮಾಡಿಕೊಡುತ್ತಿದ್ದು ಸಹಕಾರ ಸಂಘಗಳು ಇನ್ನಷ್ಟು ಬೆಳೆಯಬೇಕು ಎಂದು ಆಶಿಸಿದರು. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ಸರ್ಕಾರದಿಂದ ನೀಡಲಾಗುತ್ತಿದೆ. ದೇಶದ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಬಹಳಷ್ಟು ಕೊಡುಗೆ ನೀಡುತ್ತಿದೆ. ಸಹಕಾರ ಸಂಘಗಳ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪಂಚಾಯಿತಿಗಳು ಶಾಶ್ವತ ಅಭಿವೃದ್ಧಿಗೆ ಒತ್ತು ನೀಡಿ: ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ವತಿಯಿಂದ ನಿರ್ಮಿಸಿರುವ ನೂತನ ವಾಣಿಜ್ಯ ಅಂಗಡಿ ಮಳಿಗೆಗಳ ಸಂಕೀರ್ಣ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು ಪಂಚಾಯಿತಿಗಳಿಗೆ ಆದಾಯ ಬರುವಂತಹ ಅತ್ಯುತ್ತಮ ಕೆಲಸ ಮಾಡಿದ್ದೀರಿ, ಆದಾಯದ ಸದ್ಬಳಕೆಯಿಂದ ಗ್ರಾಮಗಳಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಸೂಚಿಸಿದರು. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸಾಗಿಸಲು ಪಂಚಾಯಿತಿ ವ್ಯವಸ್ಥೆ, ನರೇಗಾ ಯೋಜನೆ ಜಾರಿಗೆ ತರಲಾಯಿತು. ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಹಣದ ಸದುಪಯೋಗ ಪಡೆದುಕೊಂಡರೆ ಗ್ರಾಮ, ಜಿಲ್ಲೆ, ರಾಜ್ಯ ದೇಶದ ಅಭಿವೃದ್ಧಿಗೆ ಪೂರಕ. ಪಂಚಾಯಿತಿಗಳಿಗೆ ಬರುವ ಹಣ ಸದ್ಬಳಕೆ ಆಗಬೇಕು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿ ಎಂದರು.
1 ಲಕ್ಷ ರೂ.ಆದಾಯ:
ವಿಶ್ವನಾಥಪುರ ಪಂಚಾಯಿತಿ ವ್ಯಾಪ್ತಿಯಲ್ಲಿ 9 ನೂತನ ವಾಣಿಜ್ಯ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು 98 ಲಕ್ಷ ರೂ.ವೆಚ್ಚ ಭರಿಸಲಾಗಿದೆ. ಈ ಕಟ್ಟಡಗಳಿಂದ ತಿಂಗಳಿಗೆ 1 ಲಕ್ಷ ರೂ.ಬಾಡಿಗೆ ಬರುವ ನಿರೀಕ್ಷೆ ಇದೆ ಎಂದು ಇಒ ಶ್ರೀನಾಥ್ ಗೌಡ ಮಾಹಿತಿ ನೀಡಿದರು. ಇದೇ ವೇಳೆ ಆಲೂರು ದುದ್ದನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ.ವೆಚ್ಚದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಹಾಗೂ 5 ಲಕ್ಷ ರೂ.ವೆಚ್ಚದಲ್ಲಿ ಹೈ ಮಾಸ್ಟ್ ದೀಪವನ್ನು ಸಚಿವರು ಉದ್ಘಾಟಿಸಿದರು.