ಜಿಲ್ಲೆ

ಜಾತಿ, ಲಿಂಗವೆಂಬ ತಾರತಮ್ಯ ಸಲ್ಲ...

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸಲಹೆ

ಲಿಂಗತ್ವ ಅಲ್ಪಸಂಖ್ಯಾತರ ಸಂವೇದನಾ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಲಿಂಗತ್ವ ಅಲ್ಪಸಂಖ್ಯಾತರು ಕಾರ್ಯ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅವರೊಂದಿಗೆ ಸೌಹಾರ್ದ, ಗೌರವಯುತವಾಗಿ ನಡೆದುಕೊಳ್ಳಬೇಕು. ನಿಯಮಾನುಸಾರ ಕೆಲಸ ಮಾಡಿಕೊಡಬೇಕು. ಕಾನೂನಿನಲ್ಲಿ ಎಲ್ಲರೂ ಸಮಾನರು. ಸಾಂವಿಧಾನಿಕವಾಗಿ ಯಾವುದೇ ಜಾತಿ, ಜನಾಂಗ, ಲಿಂಗವೆಂಬ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂನ್ 6ರಂದು ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಸಂವೇದನೆ ಮೂಡಿಸುವ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾನೂನು ಕ್ರವದ ಎಚ್ಚರಿಕೆ

ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆ, ಕಾರ್ಯಕ್ರಮ ಜಾರಿಗೆ ತಂದಿದೆ. ಅವುಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಲಿಂಗತ್ವ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳಬೇಕು. ಅವರೊಂದಿಗೆ ಅಗೌರವವಾಗಿ ವರ್ತಿಸಿದರೆ ಅಂತಹ ಸರ್ಕಾರಿ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತರಬೇತಿ, ಆರ್ಥಿಕ ಸೌಲಭ್ಯ

ಜಿಪಂ ಸಿಇಒ ಪ್ರತೀಕ ಬಾಯಲ್​ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಎನ್​ಆರ್​ಎಲ್​ಎಂನಲ್ಲಿ ಅವಕಾಶವಿದೆ. ಸ್ವ-ಸಹಾಯ ಸಂಘಗಳ ಗುಂಪು ಮಾಡಿಕೊಂಡರೆ ಸ್ವಯಂ ಉದ್ಯೋಗ ಕೈಗೊಳ್ಳಲು ಕೌಶಲ ತರಬೇತಿ ಹಾಗೂ ಆರ್ಥಿಕ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ನಿವೇಶನ ಅಥವಾ ವಸತಿ ಸೌಲಭ್ಯ ಪಡೆಯಲು ಗ್ರಾಪಂಗಳಿಗೆ ಅರ್ಜಿ ಸಲ್ಲಿಸಿದರೆ ಆದ್ಯತೆಯ ಮೇಲೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಾಗಾರದಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ ಪಿ.ಆರ್​., ಎಎಸ್ಪಿ ಪಿ.ಎ. ಹೆಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ, ಡಿಡಿಪಿಐ ಡಾ.ಅಶೋಕ ಕಾಮತ್​, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮನ್ನು ಹೆಣ್ಣು ಮಕ್ಕಳೆಂದೇ ಪರಿಗಣಿಸಿ

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕಾರ್ಯಕರ್ತೆ ಹಾಗೂ ಒಂದೆಡೆ ಸಂಘಟನೆಯ ಸಂಸ್ಥಾಪಕಿ ಡಾ. ಅಕೈ ಪದ್ಮಶಾಲಿ ಮಾತನಾಡಿ, ಸಾಧನೆಗೆ ಲಿಂಗ ತಾರತಮ್ಯವಿಲ್ಲ. ಭಾರತದ ನ್ಯಾಯಾಂಗ ವ್ಯವಸ್ಥೆಯು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಹಕ್ಕುಗಳನ್ನು ಎತ್ತಿ ಹಿಡಿದು, ಸ್ವತಂತ್ರವಾಗಿ ಜೀವಿಸಲು ಸಹಕಾರ ನೀಡುತ್ತಿದೆ. ಹುಟ್ಟಿದ್ದು ಗಂಡಾಗಿ, ಬೆಳೆಯುತ್ತ ಹೆಣ್ಣಾದಾಗ ಸಮಾಜದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗುತ್ತದೆ. ನಮ್ಮನ್ನು ಹೆಣ್ಣು ಮಕ್ಕಳು ಎಂದೇ ಸಮಾಜ ಪರಿಗಣಿಸಬೇಕು ಹಾಗೂ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.

ಸುಶಿಕ್ಷಿತರಾಗಿದ್ದರೂ ಭಿಕ್ಷಾಟನೆ

ಸಂವಾದದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಮಾತನಾಡಿ, ನಾವು ಪ್ರೌಢಾವಸ್ಥೆಗೆ ಬಂದಾಗ ಅನಿವಾರ್ಯವಾಗಿ ನಮ್ಮ ಕುಟುಂಬ ತ್ಯಜಿಸುವುದು ಹಾಗೂ ಹುಟ್ಟಿದ ಊರು ಬಿಟ್ಟು ಬೇರೆ ಊರಿನಲ್ಲಿ ನೆಲೆಸಬೇಕಾಗುತ್ತದೆ. ಆದರೆ, ಅಲ್ಲಿ ವಾಸಿಸಲು ಮನೆ ಸಿಗುವುದಿಲ್ಲ. ಮನೆಗಳ ಅವಶ್ಯಕತೆ ನಮಗೆ ಇರುತ್ತದೆ. ಉತ್ತಮ ಶಿಕ್ಷಣ ಹೊಂದಿದ್ದರೂ ಸಹ ಉದ್ಯೋಗಾವಕಾಶ ಸಿಗುತ್ತಿಲ್ಲ. ಅನಿವಾರ್ಯವಾಗಿ ಭಿಕ್ಷಾಟನೆ ಮಾಡುತ್ತೇವೆ. ನಮಗೆ ಉದ್ಯೋಗದ ಅವಕಾಶ, ವಾಸಿಸಲು ಮನೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆ ಪಡೆಯಲೂ ಸಹ ಲಿಂಗತ್ವ ಅಲ್ಪಸಂಖ್ಯಾತರು ಅರ್ಹರಿದ್ದು, ಫಲಾನುಭವಿ ಮಾಡಬೇಕು. ಈ ಸಮುದಾಯದವರಿಗೆ ವಾಸಿಸಲು ಮನೆ, ಉದ್ಯೋಗ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವಂತೆ ಕೋರಿಕೆಗಳಿವೆ. ಅವುಗಳನ್ನು ಆದ್ಯತೆಯ ಮೇಲೆ ನೀಡಲು ಮುಂದಾಗಬೇಕು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ