ಲಿಂಗಸುಗೂರಿನ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಏರ್ಪಡಿಸಿದ್ದ ಮನೆ-ಮನಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಇಳಕಲ್ ಚಿತ್ತರಗಿ ಮಠದ ಗುರು ಮಹಾಂತ ಶ್ರೀಗಳು ಮಾತನಾಡಿದರು. ಶಿರೂರು ಬಸವಲಿಂಗ ಸ್ವಾಮೀಜಿ, ಸಿದ್ಧಲಿಂಗ ಶ್ರೀಗಳು, ಅಕ್ಕನ ಬಳಗದ ಅಧ್ಯಕ್ಷೆ ಚನ್ನಮ್ಮ ಸಕ್ರಿ, ಡಾ.ಗಂಗಮ್ಮ ಸತ್ಯಂಪೇಟ್, ಡಾ.ಲತಾ ಹೆಸರೂರು ಇತರರಿದ್ದರು. 
ಜಿಲ್ಲೆ

ಲಿಂಗ ಸಮಾನತೆ ಸಾರಿದ್ದು ಬಸವ ಧರ್ಮ

ನರೇಶ್ ಕುಮಾರ್

ಲಿಂಗಸುಗೂರು: ನೈತಿಕ, ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಸಮಾನತೆ ಸಾರಿ ಜಾತಿ ವ್ಯವಸ್ಥೆ ವಿರೋಧಿಸಿದವರು ಬಸವಣ್ಣನವರು ಎಂದು ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಶ್ರೀಗಳು ಹೇಳಿದರು.

ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಶನಿವಾರ ಬಸವ ಕೇಂದ್ರ, ಅಕ್ಕನ ಬಳಗ, ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್, ಜಾಗತಿಕ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಏರ್ಪಡಿಸಿದ್ದ ಮನೆ-ಮನಗಳಲ್ಲಿ ವಚನ ಶ್ರಾವಣ ವೈಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಕೆಟ್ಟ ಮನಸ್ಥಿತಿ ಹೀರಿಕೊಳ್ಳುವ ಶಕ್ತಿ ಕಪ್ಪು ಕಾಡಿಗೆಗೆ ಇದೆ. ಅದೇ ಕಪ್ಪು ಕಾಡಿಗೆ ಬಳಸಿಕೊಂಡು ಬಸವಣ್ಣನವರು ಲಿಂಗಾಕಾರ ಕೊಟ್ಟರು. ಲಿಂಗ ಸಮಾನತೆ ಸಾರಿದ್ದು ಬಸವ ಧರ್ಮ, ಲಿಂಗಕ್ಕೆ ಜಾತಿ, ಧರ್ಮ ಅಂಟಿಸಿದವರು ನಮ್ಮಂಥ ಸ್ವಾಮಿಗಳು. ಮನುಷ್ಯ ಮನಸ್ಸು ಪರಿವರ್ತನೆ ಮಾಡಿಕೊಂಡು ದೇವರಾಗಬೇಕು. ದೈವತ್ವ ಧಾರಣೆ ಮಾಡಬೇಕು. ದೃಷ್ಟಿಯೋಗದಿಂದ ಇದು ಸಾಧ್ಯ ಎಂದ ಶ್ರೀಗಳು, ಶರಣರ ವಚನ, ತತ್ವಗಳನ್ನು ಬಿತ್ತರಿಸುವ ಕಾರ್ಯದಿಂದ ಮಕ್ಕಳ, ಯುವಕರ ಮನ ಪರಿವರ್ತನೆ ಮಾಡಲು ಸಾಧ್ಯ ಎಂದರು.

ಗದಗ ವಚನ ಕೇಂದ್ರದ ಅಶೋಕ ಬರಗುಂಡಿ ಮಾತನಾಡಿ, ವೈಜ್ಞಾನಿಕ, ವೈಚಾರಿಕವಾಗಿ ಬದುಕುವುದೇ ಬಸವಧರ್ಮ. ಕಲ್ಯಾಣ ಕ್ರಾಂತಿ ನಂತರ ಶರಣರು ನಾಡಿನ ತುಂಬ ಚದುರಿ ಹೋದರು. ಒಂದೊಂದು ಊರು ಶರಣರ ಪರಂಪರೆಯ ಹೆಸರನ್ನು ಕಾಣುತ್ತಿದ್ದೇವೆ. ಎಂ.ಎಂ.ಕಲಬುರಗಿ ಅವರು ಹೇಳಿದಂತೆ ಸ್ಥಳ ನಾಮ, ಕ್ಷೇತ್ರ ನಾಮಗಳ ಕುರಿತು ಚಿಂತನೆ ಮಾಡುವ ಕೆಲಸ ಈಗಲೂ ನಡೆಯಬೇಕಿದೆ ಎಂದರು.

ಲಿಂಗಸುಗೂರು ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದ ಸಿದ್ಧಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಶಿರೂರು ಬಸವಲಿಂಗ ಸ್ವಾಮೀಜಿ, ಅಕ್ಕನ ಬಳಗದ ಅಧ್ಯಕ್ಷೆ ಚನ್ನಮ್ಮ ಸಕ್ರಿ, ಡಾ.ಗಂಗಮ್ಮ ಸತ್ಯಂಪೇಟ್, ಡಾ.ಲತಾ ಹೆಸರೂರು, ಸೋಮಶೇಖರ ಬಳಗಾನೂರು, ಶೇಖರಪ್ಪ ಇಜೇರಿ, ಶೈಲಜಾ ಬನ್ನಿಕೊಪ್ಪ, ದೊಡ್ಡಪ್ಪ ಹೆಸರೂರು ಇದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಪಂಚಾಕ್ಷರಯ್ಯ ಹಿರೇಮಠ ಅವರು ರಚಿಸಿದ ‘ಸಮಸ್ತ ಶಿಕ್ಷಕ ಮತ್ತು ವಿದ್ಯಾರ್ಥಿ ಲೋಕಕ್ಕೆ ಅರ್ಪಣೆ’ ಗ್ರಂಥವನ್ನು ಚಿತ್ತರಗಿ ಗುರು ಮಹಾಂತ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಹಾಗೂ ಇತರರು ಬಿಡುಗಡೆ ಮಾಡಿದರು.