ಕಂಪ್ಲಿಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಉಚಿತ ವಧುವರರ ಮಾಹಿತಿ ಕೇಂದ್ರವನ್ನು ಬುಕ್ಕಸಾಗರ ಶ್ರೀವಿಶ್ವಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ಮುಕ್ಕುಂದಿ ಶಿವಗಂಗಮ್ಮ, ಬಿ.ಎಂ.ಪುಷ್ಪಾ, ಡಾ.ಶಾರದಾಹಿರೇಮಠ, ಇಟಗಿ ಬಸವರಾಜಗೌಡ ಇತರರಿದ್ದರು. 
ಜಿಲ್ಲೆ

ಲಿಂಗ ತಾರತಮ್ಯ ಎಸಗದೆ ಶಿಕ್ಷಣ- ಸಂಸ್ಕಾರ ನೀಡಿ

ಕಂಪ್ಲಿ: ಆಸ್ತಿ, ಸರ್ಕಾರಿ ಉದ್ಯೋಗಸ್ಥರಿಗಿಂತ ಸಂಸ್ಕಾರವಂತ ವಧು-ವರರನ್ನು ಆಯ್ಕೆಮಾಡಿಕೊಳ್ಳುವಲ್ಲಿ ಪೋಷಕರು ನಿಗಾವಹಿಸಬೇಕು ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನಮಠದ ಶ್ರೀವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಉಚಿತ ವಧುವರರ ಮಾಹಿತಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ, ಇಂದಿನ ದಿನಗಳಲ್ಲಿ ವಧು-ವರರನ್ನು ಅನ್ವೇಷಿಸುವುದು ಬಹುದೊಡ್ಡ ಸಮಸ್ಯೆಯಾಗಿದೆ. ಮಹಿಳಾ ಮಂಡಳಿಯವರು ಉಚಿತ ವಧುವರರ ಕೇಂದ್ರ ಆರಂಭಿಸಿದ್ದರಿಂದ ಆರ್ಥಿಕವಾಗಿ ಹಿಂದುಳಿದ ವಧು-ವರರಿಗೆ ಅನುಕೂಲವಾಗಿದ್ದು ಸಮಾಜದವರು ಸದ್ಭಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಲಿಂಗ ತಾರತಮ್ಯ ಎಸಗದೆ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ಹೇಳಿದರು.

ಅಕ್ಕಮಹಾದೇವಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಬಿ.ಎಂ.ಪುಷ್ಪಾ ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಉದ್ದೇಶಿಸಲಾಗಿದ್ದು, ವೀರಶೈವ ಲಿಂಗಾಯತ ಸಮುದಾಯದ ವಧು ವರರು ಹೆಸರುಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೋಂದಾಯಿಸಿ ಸೂಕ್ತಮಾಹಿತಿ ಪಡೆದುಕೊಳ್ಳಬೇಕು ಎಂದರು.

ಪದಾಧಿಕಾರಿಗಳಾದ ಡಾ.ಶಾರದಾಹಿರೇಮಠ, ವಾಲಿ ಶಕುಂತಲಾ, ಕವಿತಾ ಘನಮಠದಯ್ಯ ಹಿರೇಮಠ, ಪಾಠಶಾಲೆ ಅಧ್ಯಕ್ಷ ಇಟಗಿ ಬಸವರಾಜಗೌಡ, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಡಾ.ಜಗನ್ನಾಥ ಹಿರೇಮಠ ಇತರರಿದ್ದರು.