ಜಿಲ್ಲೆ

ಪಾರದರ್ಶಕ ಲೋಕಸಭಾ ಚುನಾವಣೆಗೆ ಜಿಲ್ಲಾಧಿಕಾರಿ ಸೂಚನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಬೇಕು. ಹೀಗಾಗಿ ಯಾವುದೇ ಲೋಪ ಆಗದಂತೆ ವಹಿಸಿದ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ ಚುನಾವಣೆ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲೆಯ ನೋಡಲ್​ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಿ ಶೇಕಡಾ ನೂರು ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಬ್ಯಾನರ್​ ತೆರವುಗೊಳಿಸಿ
ಚುನಾವಣೆ ಘೋಷಣೆಯಾದ ತಕ್ಷಣ ಜಿಲ್ಲೆಯ ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ-&ಕಾಲೇಜುಗಳ ಗೋಡೆಯ ಮೇಲಿನ ಬರಹ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ರಾಜಕೀಯ ಪಕ್ಷಗಳ ಬ್ಯಾನರ್​, ಫ್ಲೆಕ್ಸ್​, ಹೋರ್ಡಿಂಗ್ಸ್​ ತೆರವುಗೊಳಿಸಬೇಕು. ವಿವಿಧ ಇಲಾಖೆಗಳ ವೆಬ್​ಸೈಟ್​ ಹಾಗೂ ಸಾಮಾಜಿಕ ತಾಣಗಳಲ್ಲಿರುವ ಸಚಿವರು ಹಾಗೂ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸಬೇಕು ಎಂದರು.

ಸೌಕರ್ಯ ಒದಗಿಸಿ
ಜಿಲ್ಲಾ ಸ್ವೀಪ್​ ಸಮಿತಿ ವತಿಯಿಂದ ಚುನಾವಣೆ ಕುರಿತು ಅರಿವು ಮೂಡಿಸಲು ವಿವಿಧ ಚಟುವಟಿಕೆ ಆಯೋಜಿಸಿ, ಮತದಾರರು ಮತದಾನಕ್ಕೆ ಬರುವಂತೆ ಸೆಳೆಯಬೇಕು. ಜಿಲ್ಲೆಯಲ್ಲಿ ಗುರುತಿಸಿರುವ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಅಂಗವಿಕಲರು, ಅಶಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ಮತದಾನ ಕೇಂದ್ರ ಸ್ವಚ್ಛವಾಗಿಡಬೇಕು. ಅಗತ್ಯವಿದ್ದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದರು.

ಕಾನೂನು ಬಾಹಿರ ಕೃತ್ಯಕ್ಕೆ ಆಸ್ಪದ ನೀಡಬೇಡಿ
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಎಂಸಿಎಂಸಿ ತಂಡಗಳು ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಸಹಾಯಕ ವೆಚ್ಚ ವೀಕ್ಷಕರು, ್ಲೆಯಿಂಗ್​ ಸ್ಕಾ$್ವಡ್​ಗಳು, ವೀಡಿಯೋ ಸರ್ವೆಲೆನ್ಸ್​ ತಂಡಗಳು, ಸ್ಟ್ಯಾಟಿಕ್​ ಸರ್ವೆಲೆನ್ಸ್​ ತಂಡಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಧಿಕಾರಿಗಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳಿಗೆ ನಿಗದಿಯಾಗುವ ಚುನಾವಣಾ ವೆಚ್ಚದ ಕುರಿತು ಸರಿಯಾದ ಲೆಕ್ಕಪತ್ರ ಇರಬೇಕು. ಆಂತರಿಕ ಪ್ರದೇಶಗಳಲ್ಲಿ ಗಾಂಜಾ ಹಾಗೂ ಕಳ್ಳಭಟ್ಟಿ ಸಾಗಣೆಯಾಗದಂತೆ ಅರಣ್ಯ ಹಾಗೂ ಅಬಕಾರಿ ಇಲಾಖೆ ಕ್ರಮವಹಿಸಬೇಕು. ಬಂದರುಗಳಿಗೆ ಆಗಮಿಸುವ ಎಲ್ಲ ಬೋಟ್​ಗಳನ್ನು ಕರಾವಳಿ ಕಾವಲು ಪಡೆಯ ಪೊಲೀಸರು ತಪಾಸಣೆ ನಡೆಸಬೇಕು. ಹೊಸದಾಗಿ ಅಭಿವೃದ್ಧಿ ಕಾರ್ಯಕ್ಕೆ ಟೆಂಡರ್​ ಹೊರಡಿಸಬಾರದು. ಈಗಾಗಲೇ ಕಾರ್ಯಾದೇಶ ನೀಡಿ, ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದು ಎಂದು ಡಿಸಿ ತಿಳಿಸಿದರು. ಜಿಪಂ ಸಿಇಒ ಪ್ರತಿಕ್​ ಬಾಯಲ್​, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಕುಂದಾಪುರ ಸಹಾಯಕ ಕಮಿಷನರ್​ ರಶ್ಮಿ ಎಸ್​., ಜಿಪಂ ಯೋಜನಾಧಿಕಾರಿ ಶ್ರೀನಿವಾಸ ರಾವ್​, ಡಿಎಫ್​ಒ ಗಣಪತಿ, ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್​ ಎಚ್​.ಎನ್​., ಡೈರೆಕ್ಟರ್​ ಐಟಿ ಹಾಗೂ ಉಡುಪಿ ಡಿಐಒ ಮಂಜುನಾಥ್​ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.