ಜಿಲ್ಲೆ

ಮಾಸಾಂತ್ಯಕ್ಕೆ ಹಳೆ ಜಿಪಂ ಕಚೇರಿಗೆ ಜೆಮ್ಸ್​ ಆ್ಯಂಡ್​ ಜ್ಯುವೆಲ್ಲರಿ

ಉಡುಪಿ: ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನ ಸಂಸ್ಥೆ ನ್ಯಾಶನಲ್​ ಇನ್​ಸ್ಟಿಟ್ಯೂಟ್​ ಆ್​ ಡಿಸೈನ್​ ಶಾಖೆ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಜೆಮ್ಸ್​ ಆ್ಯಂಡ್​ ಜ್ಯುವೆಲ್ಲರಿ(ಐಐಜಿಜೆ) 2017ರಿಂದ ಕರಾವಳಿ ಬೈಪಾಸ್​ ಬಳಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಜುಲೈ ಮಾಸಾಂತ್ಯಕ್ಕೆ ಜಿಲ್ಲಾಡಳಿತ ಮಂಜೂರು ಮಾಡಿರುವ ಬನ್ನಂಜೆ ಜಿ.ಪಂ. ಹಳೆ ಕಟ್ಟಡದಲ್ಲಿ ಸ್ಥಳಾಂತರಗೊಳ್ಳಲಿದೆ.

ಜಿ.ಪಂ. ಹಳೆ ಕಟ್ಟಡದ 1,2,3 ಮೂರನೇ ಮಹಡಿಯಲ್ಲಿ ಐಐಜಿಜೆಗೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸ್ಥಳಾವಕಾಶ ಲಭ್ಯವಾಗಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ಪಡೆಯಲು ಆಗಮಿಸುವವರಿಗೆ ಅನುಕೂಲವಾಗಲಿದೆ. ಸದ್ಯ ಡಿಸೈನಿಂಗ್​, ಮ್ಯಾನುಫ್ಯಾಕ್ಚರಿಂಗ್​, ಕ್ಯಾಸ್ಟಿಂಗ್​ ವಿಭಾಗದಲ್ಲಿ ತಲಾ 10 ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದು, ಬನ್ನಂಜೆಗೆ ಸ್ಥಳಾಂತರಿಸಿದ ಬಳಿಕ ಪ್ರತಿ ವಿಭಾಗದಲ್ಲಿ 30 ವಿದ್ಯಾರ್ಥಿಗಳಿಗೆ ಅವಕಾಶ ಲಭ್ಯವಾಗಲಿದೆ. ಐಐಜಿಜೆಗೆ ಈ ಹಿಂದೆ ಉಪ್ಪೂರಲ್ಲಿ ಜಾಗ ಗುರುತಿಸಲಾಗಿದ್ದರೂ ಸಂಸ್ಥೆಯಲ್ಲಿರುವ ಅತ್ಯಾಧುನಿಕ ಯಂತ್ರೋಪಕರಣಗಳ ಪ್ರಯೋಜನ ಸುತ್ತಮುತ್ತಲಿನ ಜಿಲ್ಲೆಯ ಅಕ್ಕಸಾಲಿಗರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಗರದಲ್ಲೇ ಸಂಸ್ಥೆಯನ್ನು ಉಳಿಸಿಕೊಳ್ಳಲಾಗಿದೆ. ಇತ್ತೀಚೆಗೆ ಕೋಟ್ಯಂತರ ರೂ. ವ್ಯಯಿಸಿ ಕ್ಯಾಡ್​ 3ಡಿ ಪ್ರಿಂಟಿಂಗ್​, ಅಟೋ ಮ್ಯಾಟಿಕ್​ ಕೌಂಟಿಂಗ್​ ಮೆಶಿನ್​, ಲೇಸರ್​ ಮಾರ್ಕರ್​, ಲೇಸರ್​ ವೆಲ್ಡರ್​ಗಳನ್ನು ಅಳವಡಿಸಲಾಗಿದೆ. ವಿದೇಶದಿಂದ ಆಮದು ಮಾಡಿಕೊಳ್ಳಲಾಗಿರುವ ಈ ಯಂತ್ರಗಳ ಸೇವೆಯನ್ನು ಕಾಮನ್​ ಫೆಸಿಲಿಟಿ ಸೆಂಟರ್​ನಲ್ಲಿ ಕಡಿಮೆ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು.

402 ಮಂದಿಗೆ ತರಬೇತಿ
2018ರಿಂದ 24ರ ತನಕ ಐಐಜಿಜೆಯಲ್ಲಿ ಒಟ್ಟು 402 ಮಂದಿಗೆ ಚಿನ್ನಾಭರಣ ತಯಾರಿಕೆ ಬಗ್ಗೆ ತರಬೇತಿ ನೀಡಲಾಗಿದ್ದು, ಶೇ. 100 ಉದ್ಯೋಗ ದೊರೆತಿದೆ. 2018&19 ನೇ ಸಾಲಿನಲ್ಲಿ 55, 2019&20ರಲ್ಲಿ 92, 2020&21ರಲ್ಲಿ 49, 2021&22ರಲ್ಲಿ 51, 2022&23ರಲ್ಲಿ 42, 2023&24ನೇ ಸಾಲಿನಲ್ಲಿ 113 ಮಂದಿಗೆ ಶಿಕ್ಷಣ ನೀಡಲಾಗಿದೆ. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 40 ವಿದ್ಯಾರ್ಥಿಗಳಿಗೆ ಪ್ರತಿದಿನ ಸಾಯಂಕಾಲ 1 ಗಂಟೆಯಂತೆ ಒಂದು ತಿಂಗಳು ಆಭರಣ ರಚನೆ ಬಗ್ಗೆ ಉಚಿತ ತರಬೇತಿ ನೀಡಲಾಗಿದೆ.

ರಪ್ತು ವ್ಯವಹಾರಕ್ಕೆ ಮಾರ್ಗದರ್ಶನ
ಜೆಮ್ಸ್​ ಆ್ಯಂಡ್​ ಜ್ಯುವೆಲ್ಲರಿ ಎಕ್ಸ್​ಪೋರ್ಟ್​ ಪ್ರಮೋಶನ್​ ಕೌನ್ಸಿಲ್​(ಜಿಜೆಇಪಿಸಿ) ಚಿನ್ನ, ಬೆಳ್ಳಿ ಆಭರಣಗಳ ರಫ್ತು ವ್ಯವಹಾರಕ್ಕೆ ಅಗತ್ಯ ಮಾರ್ಗದರ್ಶನವನ್ನು ನೀಡಲಿದೆ. ಪಿಯುಸಿ ಅಥವಾ ಪದವಿ ಪಡೆದವರು ಇಲ್ಲಿ ತರಬೇತಿ ಪಡೆಯಬಹುದು. ಇಲ್ಲಿನ ವಿದ್ಯಾರ್ಥಿಗಳಿಗೆ ದೇಶ, ವಿದೇಶದ ಚಿನ್ನಾಭರಣ ಮಳಿಗೆ, ಉತ್ಪಾದನಾ ಕೇಂದ್ರಗಳಲ್ಲಿ ಉದ್ಯೋಗಾವಕಾಶ ಸಿಗಲಿದೆ.