ಜಿಲ್ಲೆ

ಜಿಲೆಟಿನ್ ಬಾಂಬ್ ಸ್ಫೋಟ, ಯುವಕ ಸಾವು

Belagavi

ಖಾನಾಪುರ: ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ ಜಿಲೆಟಿನ್ ಬಾಂಬ್ ಸ್ಫೋಟಗೊಂಡ ಪರಿಣಾಮ ಓರ್ವ ಯುವಕ ದಾರುಣವಾಗಿ ಮೃತಪಟ್ಟಿದ್ದು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬಿಜಗರ್ಣಿ ಗ್ರಾಮದ ಬಳಿ ಬುಧವಾರ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿ ಗಿರೀಶ ರಜಪೂತ (28) ಮೃತಪಟ್ಟ ಯುವಕ. ಬಿಜಗರ್ಣಿ ಗ್ರಾಮದ ಶಿವಕುಮಾರ ರಜಪೂತ (27) ಗಂಭೀರವಾಗಿ ಗಾಯಗೊಂಡಿದ್ದಾನೆ.

ಘಟನೆಯ ವಿವರ: ಕಾಡುಹಂದಿ ಬೇಟೆಯ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗದ ಕೆಲ ಯುವಕರು ಕಳೆದ ಕೆಲ ದಿನಗಳಿಂದ ತಾಲೂಕಿನ ಬೀಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ನಿತ್ಯವೂ ರಾತ್ರಿ ವೇಳೆಯಲ್ಲಿ ಖಾನಾಪುರದ ಅರಣ್ಯ ಪ್ರದೇಶ ಮತ್ತು ಅರಣ್ಯದಂಚಿನ ಕೃಷಿ ಜಮೀನುಗಳಿಗೆ ತೆರಳಿ, ಅಲ್ಲಿ ಜಿಲೆಟಿನ್ ಬಾಂಬ್ ಹುದುಗಿಸಿಟ್ಟು ಕಾಡುಹಂದಿಗಳನ್ನು ಬೇಟೆಯಾಡುತ್ತಿದ್ದರು.

ದೇಹ ಇಬ್ಭಾಗ: ಮಂಗಳವಾರ ರಾತ್ರಿ ಗಿರೀಶ ಮತ್ತು ಶಿವಕುಮಾರ ಇಬ್ಬರೂ ತಾಲೂಕಿನ ಮಾಚಿಗಡ-ಪಡಲವಾಡಿ-ಹಲಸಾಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಡುಹಂದಿ ಬೇಟೆಗಾಗಿ ಜಿಲೆಟಿನ್ ಬಾಂಬ್ ಹುದುಗಿಸಿಟ್ಟು ಮರಳಿ ಬೀಡಿ ಗ್ರಾಮಕ್ಕೆ ಬಂದಿದ್ದರು.

ಬುಧವಾರ ಬೆಳಗ್ಗೆ ಬಾಂಬ್ ಹುದುಗಿಸಿಟ್ಟ ಸ್ಥಳಗಳಿಗೆ ತೆರಳಿದಾಗ, ಅವರ ಪ್ರಯತ್ನಕ್ಕೆ ಕಾಡುಹಂದಿ ಸತ್ತಿರಲಿಲ್ಲ. ಹೀಗಾಗಿ ಜಿಲೆಟಿನ್ ಬಾಂಬ್ ಸಮೇತ ಬೈಕ್‌ನಲ್ಲಿ ಮರಳಿ ಬೀಡಿ ಗ್ರಾಮದತ್ತ ತೆರಳುತ್ತಿದ್ದರು. ಬಿಜಗರ್ಣಿ ಗ್ರಾಮದ ಬಳಿ ಇವರ ಬೈಕ್ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಗುದ್ದಿದ್ದರಿಂದ ಇವರ ಬಳಿಯಿದ್ದ ಬಾಂಬ್ ಇರುವ ಚೀಲ ಟ್ರ್ಯಾಕ್ಟರ್ ಚಕ್ರದ ಕೆಳಗೆ ಸಿಲುಕಿ ಬಾಂಬ್ ಸ್ಫೋಟಗೊಂಡಿದೆ.

ಇದರಿಂದಾಗಿ ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಗಿರೀಶನ ದೇಹ ಇಬ್ಭಾಗವಾಗಿದೆಯಲ್ಲದೆ ಛಿದ್ರಗೊಂಡು ರಸ್ತೆ ಪಕ್ಕದ ಕೃಷಿಭೂಮಿಯಲ್ಲಿ ಬಿದ್ದಿದೆ. ಸ್ಫೋಟದ ತೀವ್ರತೆಗೆ ರಸ್ತೆಯಿಂದ 20 ಅಡಿ ದೂರದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ.

ಆಕಸ್ಮಿಕವಾಗಿ ನಡೆದ ಈ ಘಟನೆಯಿಂದಾಗಿ ತಾಲೂಕಿನ ಅರಣ್ಯದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಅಕ್ರಮ ಚಟುವಟಿಕೆ ಬಹಿರಂಗಗೊಂಡಿದೆ.
ಘಟನಾ ಸ್ಥಳಕ್ಕೆ ಸಿಪಿಐ ಸುರೇಶ ಶಿಂಗಿ ಹಾಗೂ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.