ಉಡುಪಿ: ಸೌರಮಾನ ಯುಗಾದಿ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಚರಿಸಲಾಯಿತು.
ಹೊಸ ವರ್ಷಕ್ಕೆ ಸ್ವಾಗತ ಹಾಗೂ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸವದ ನಿಮಿತ್ತ ಶ್ರೀಕೃಷ್ಣನಿಗೆ ಕಿರಿಯ ಸ್ವಾಮೀಜಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೀತೋಪದೇಶ ಅಲಂಕಾರ ಮಾಡಿದರು. ಹಿರಿಯ ಶ್ರೀಗಳು ಮಹಾಪೂಜೆ ನೆರವೇರಿಸಿದರು.
ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಮಠದ ಪುರೋಹಿತ ಹೆರ್ಗ ವೇದವ್ಯಾಸ ಭಟ್ ಅವರು ಕ್ರೋಧಿ ನಾಮ ಸಂವತ್ಸರದ ಪಂಚಾಂಗ ಶ್ರವಣ ನಡೆಸಿದರು. ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನೂತನ ಸಂವತ್ಸರದಲ್ಲಿ ಆಶೀರ್ವಚನ ನೀಡಿ ಹರಸಿದರು. ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಯುಗಾದಿಯ ಪ್ರಯುಕ್ತ ರಥಬೀದಿಯಲ್ಲಿ ಶ್ರೀಕೃಷ್ಣ ಮುಖ್ಯ ಪ್ರಾಣ ದೇವರ ಚಿನ್ನದ ರಥೋತ್ಸವ ನಡೆಯಿತು. ನಂತರ ಅಷ್ಟಾವಧಾನ ಸೇವೆಯೊಂದಿಗೆ ತೊಟ್ಟಿಲು ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರ "ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ' ಎಂಬ ವಿಷಯದ ಪ್ರವಚನ ಮಂಗಳ ನಡೆಸಿದರು.