ಕೋಟ: ಗೀತಾನಂದ ಫೌಂಡೇಶನ್ ಯಾವುದೇ ಅಪೇಕ್ಷೆ ಇಲ್ಲದೆ ಬಡವರ ಕಣ್ಣೀರೊರೆಸುವ ಕೆಲಸ ಮಾಡುತ್ತದೆ ಎಂದು ಗೀತಾನಂದ ಫೌಂಡೇಶನ್ ಮಣೂರು ಪಡುಕರೆಯ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.
ಕೋಟದ ಪಡುಕರೆ ಸಂಯುಕ್ತ ಪ್ರೌಢಶಾಲಾ ಸಭಾಂಗಣದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ವತಿಯಿಂದ 18 ಸರ್ಕಾರಿ ಶಾಲೆಗಳ ಸುಮಾರು ಮೂರು ಸಾವಿರ ಮಕ್ಕಳಿಗೆ ಉಚಿತ ನೋಟ್‌ಬುಕ್ ಹಾಗೂ ಅಂಗವೈಕಲ್ಯವುಳ್ಳವರಿಗೆ ಗಾಲಿ ಸೈಕಲ್, ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸುವ ‘ಆನಂದೋತ್ಸವ’ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪಾದಿಸಿದ ಸ್ವಲ್ಪ ಭಾಗ ಜನಸಾಮಾನ್ಯರ ಕಷ್ಟಕ್ಕೆ ವ್ಯಯಿಸುವ ಜವಾಬ್ದಾರಿಯುತ ಕಾರ್ಯವನ್ನು ಮುಂದುವರಿಸಿದ್ದೇವೆ. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸಂಚಲನ ಮೂಡಿಸಿ ಬಡ ವಿದ್ಯಾರ್ಥಿಗಳ ನೆರವಾಗುತ್ತಿರುವುದಕ್ಕೆ ಹೆಮ್ಮೆ ಇದೆ. ಈ ಭಾಗದ ಬಹುದಿನಗಳ ಕನಸಾದ ಪದವಿ ಪೂರ್ವ ಕಾಲೇಜು ಸ್ಥಾಪನೆ ಹಾಗೂ ಇಲ್ಲಿನ ಶಾಲೆಗಳಲ್ಲಿ ಶಿಕ್ಷಕ ಕೊರೆತೆ ನೀಗಿಸಲು ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ, ಸಾಲಿಗ್ರಾಮದ ಪಿ.ವಿ. ಆನಂದ್ ಅವರನ್ನು ಸನ್ಮಾನಿಸಲಾಯಿತು. 2019-20 ಮತ್ತು 20-21ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 37ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಲಾಯಿತು. ಸ್ಥಳೀಯ ಅಂಗವಿಕಲರಿಗೆ ಗಾಲಿ ಸೈಕಲ್ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಂಯುಕ್ತ ಪ್ರೌಢಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋವೈದ್ಯ ಡಾ.ಸಿ. ಪ್ರಕಾಶ್ ತೋಳಾರ್, ಲಕ್ಷ್ಮೀಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ಉಡುಪಿ ಜಿಲ್ಲಾ ಪ್ರೌಢಶಾಲಾ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ, ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ. ಕುಂದರ್, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜಯಂತಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕಾಂಚನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೌಢಶಾಲಾ ಶಿಕ್ಷಕ ಶ್ರೀಧರ ಶಾಸ್ತ್ರಿ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಜನತಾ ಫಿಶ್ ಮೀಲ್ ಮ್ಯಾನೇಜರ್ ಶ್ರೀನಿವಾಸ ಕುಂದರ್ ವಂದಿಸಿದರು.