ಜಿಲ್ಲೆ

ಪುನೀತ್, ಎಸ್‌ಪಿಬಿ ಅಪ್ರತಿಮ ಸಾಧಕರು ; ಪುಟ್ಟಸ್ವಾಮಿ ಗೌಡ ಹೇಳಿಕೆ

Chikkaballapur

ಗೌರಿಬಿದನೂರು: ನಟ ಪುನೀತ್ ಹಾಗೂ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ಅಪ್ರತಿಮ ಸಾಧಕರು ಎಂದು ಕೆ.ಎಚ್. ಫೌಂಡೇಶನ್ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.

ಕರ್ನಾಟಕ ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂ ಹಾಗೂ ಗಡಿನಾಡು ಆರ್ಕೆಸ್ಟ್ರಾ ಕಲಾವಿದರ ಸಂದ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಗೀತನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಬ್ಬರೂ ಕಲಾ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರ ಮೂಲ ಆಂಧ್ರ ಪ್ರದೇಶದವರಾದರೂ ಕನ್ನಡ ಭಾಷೆ ಮೇಲೆ ಅವರಿಗಿದ್ದ ಇದ್ದ ಪ್ರೀತಿಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ , ಅವರು ಕನ್ನಡದ ಮನೆ ಮಗನಂತಾಗಿ ಇದ್ದರು ಎಂದರು.

ಪುನೀತ್ ಅವರು ಕಿರಿಯ ವಯಸ್ಸಿಗೆ ಹಿರಿಯ ಸಾಧನೆ ಮಾಡಿದ್ದಾರೆ. ನಟನೆ ಮಾತ್ರವ್ಲ ಅವರು ಎಂತಹ ಹೃದಯವಂತಹ ವ್ಯಕ್ತಿಯಾಗಿದ್ದರು ಎಂಬುದು ಅವರ ನಿಧನದ ಬಳಿಕ ಜನತೆಗೆ ತಿಳಿಯುತ್ತಿದೆ. ಅನೇಕ ದಾನ ಧರ್ಮದ ಕೆಲಸಗಳನ್ನು ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಎಂದರು.

ಜಿ.ಪಂ.ಮಾಜಿ ಸದಸ್ಯ ಡಿ.ನರಸಿಂಹಮೂರ್ತಿ ಮಾತನಾಡಿ, ಪುನೀತ್ ಹಾಗೂ ಎಸ್‌ಪಿಬಿ ಅವರು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಅವರ ಸಾಧನೆ ಹಾಗೂ ನೆನಪುಗಳು ನಮ್ಮಲ್ಲಿ ಚಿರಕಾಲ ಉಳಿಯಲಿವೆ. ಮುಂದಿನ ಪೀಳಿಗೆಗೆ ಅವರು ಪ್ರೇರಣೆಯಾಗಲಿದ್ದಾರೆ ಎಂದರು.

ಕಲಾವಿದರ ಸಂದ ಸಂಸ್ಥಾಪಕ ಅಧ್ಯಕ್ಷ ಮಕಲ್ ಸುರೇಶ ಮಾತನಾಡಿ, ಕಲಾವಿದರ ಕಷ್ಟಗಳನ್ನು ಗುರುತಿಸಿ ಸ್ಪಂದಿಸುವ ಗೌರವಿಸುವ ಕೆಲಸವನ್ನು ಸರಕಾರಗಳು ಮಾಡಬೇಕು ಎಂದರು.

ಕಲಾವಿದರು ಪುನೀತ್ ಹಾಗೂ ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಹಾಡಿ ಗೀತ ನಮನ ಸಲ್ಲಿಸಿದರು. ಕಲಾವಿದರ ಸಂದ ರಾಜ್ಯ ಉಪಾಧ್ಯಕ್ಷ ಎಸ್.ನಾರಾಯಣ್, ಸರಿಗಮಪ ಖ್ಯಾತಿಯ ಪೊಲೀಸ್ ಸುಬ್ರಮಣ್ಯ, ನಗರಸಭೆ ಸದಸ್ಯರಾದ ರಾಜಕುಮಾರ್, ಸಪ್ತಗಿರಿ, ಮುಖಂಡರಾದ ಕೆ.ಎಸ್.ಅನಂತರಾಜು, ಗಂಗಾಧರಪ್ಪ, ಶ್ರೆನಿವಾಸಗೌಡ, ನಾಗಾರ್ಜುನ, ಸಂದೀಪ್, ಕಿರಣ್ ಗೌಡ ಹಾಜರಿದ್ದರು.