ಜಿಲ್ಲೆ

ಗೀತಾ ಲೇಖನ ದೀಕ್ಷೆ ಪಡೆದ ಗೋವಾ ಸಿಎಂ...

ಉಡುಪಿಗೆ ಪ್ರಮೋದ್​ ಸಾವಂತ್​ ಭೇಟಿ

ಶ್ರೀಕೃಷ್ಣ, ಮುಖ್ಯಪ್ರಾಣ ದೇವರ ದರ್ಶನ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯ ಬೈಂದೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​, ಉಡುಪಿಯ ಶ್ರೀಕೃಷ್ಣ ಮಠಕ್ಕೆ ಗುರುವಾರ ಭೇಟಿ ನೀಡಿದರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಸಾಂಪ್ರದಾಯಿಕವಾಗಿ ಸಿಎಂ ಸಾವಂತ್​ ಅವರನ್ನು ಸ್ವಾಗತಿಸಿ, ಗೌರವಿಸಲಾಯಿತು. ಬಳಿಕ ಅವರು ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣದೇವರ ದರ್ಶನ ಪಡೆದು, ಗೀತಾ ಮಂದಿರಕ್ಕೆ ಆಗಮಿಸಿದರು.

ಸಮಸ್ತ ದೇಶಕ್ಕೆ ಒಳಿತಾಗಲಿ

ಸುಗುಣೇಂದ್ರ ಶ್ರೀಗಳು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬಳಿಕ ಗೋವಾ ಸಿಎಂ, ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿದರು.

ನಾನಿಂದು ಉಡುಪಿಯ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದು, ಪರ್ಯಾಯ ಸುಗುಣೇಂದ್ರ ಶ್ರೀಗಳಿಂದ ಆಶೀರ್ವಾದ ಪಡೆದಿದ್ದೇನೆ. ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮವು ಅತ್ಯಂತ ಶ್ರೇಷ್ಠವಾದುದಾಗಿದೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ, ದೇಶದೊಂದಿಗೆ
ವಿದೇಶಗಳಲ್ಲಿಯೂ ಸಹ ಶ್ರೀಗಳು ಧರ್ಮಪ್ರಸಾರದ ಕಾರ್ಯ ಮಾಡುತ್ತಿರುವುದು ಅತ್ಯಂತ ಮಹತ್ವದ ಹಾಗೂ ಅರ್ಥಪೂರ್ಣವಾದ ಕಾರ್ಯವಾಗಿದೆ. ಸನಾತನ ಹಿಂದು ಸಂಸ್ಕೃತಿಯ ರಕ್ಷಣೆಗಾಗಿ ಜಗತ್ತಿನಾದ್ಯಂತ ಭಗವದ್ಗೀತೆಯ ಪ್ರಸಾರ ಮಾಡುತ್ತಿರುವ, ಆ ಕುರಿತು ಜಾಗೃತಿ ಮೂಡಿಸುತ್ತಿರುವ ಪುತ್ತಿಗೆ ಶ್ರೀಗಳ ಕಾರ್ಯ ಅನನ್ಯವಾದದು. ನಾನೂ ಸಹ ಗೀತಾ ದೀಕ್ಷೆ ಪಡೆದಿದ್ದು, ನಿತ್ಯವೂ ಗೀತೆಯನ್ನು ಬರೆದು ಶ್ರೀಕೃಷ್ಣನಿಗೆ ಸಮರ್ಪಿಸುತ್ತೇನೆ. ಪ್ರಮುಖವಾಗಿ ನನ್ನ ಗೋವಾ ರಾಜ್ಯಕ್ಕೆ ಹಾಗೂ ಭಾರತ ದೇಶಕ್ಕೆ ಒಳಿತಾಗಲೆಂಬ ಸಂಕಲ್ಪದಿಂದ ಗೀತಾ ಲೇಖನ ಯಜ್ಞ ಸ್ವೀಕರಿಸಿದ್ದೇನೆ ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ, ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇತರರಿದ್ದರು.