ಮೈಸೂರು: ನಮ್ಮ ಆಹಾರದ ಬಟ್ಟಲಿನಿಂದ ಗೆಡ್ಡೆ ಗೆಣಸುಗಳು ಮಾಯವಾಗಿವೆ. ಇವುಗಳ ನಿರಂತರ ಬಳಕೆಯಿಂದ ಶರೀರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ. ಆರೋಗ್ಯದ ಜೀವನಕ್ಕೆ ಗೆಡ್ಡೆ ಗೆಣಸುಗಳ ಬಳಕೆ ಪೂರಕ ಎಂದು ಆಹಾರ ತಜ್ಞೆ ರತ್ನಾ ರಾಜಯ್ಯ ಹೇಳಿದರು.
ಸಹಜ ಸಮೃದ್ಧ, ರೋಟರಿ ಕ್ಲಬ್‌ಮೈಸೂರು ಪಶ್ಚಿಮ ಹಾಗೂ ಸಹಜ ಸೀಡ್ಸ್ ಆಶ್ರಯದಲ್ಲಿ ನಗರದ ನಂಜರಾಜ ಬಹುದ್ದೂರ್ ಛತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಬರಗಾಲದ ಬೆಳೆಗಳು ಎಂದು ಪರಿಗಣಿಸಿದ ಗೆಡ್ಡೆ ಗೆಣಸುಗಳು ಪೋಷಕಾಂಶದ ಖಜಾನೆ. ಇಷ್ಟೊಂದು ಬಗೆಯ ಗೆಡ್ಡೆ ಗೆಣಸು ಇರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಮರೆತು ಹೋದ ಆಹಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ ತೀರ್ಪುಗಾರರಾಗಿದ್ದ ಸಾವಯವ ಕೃಷಿಕ ಹುಣಸೂರಿನ ಪಾಸಿಟೀವ್ ತಮ್ಮಯ್ಯ ಮಾತನಾಡಿ, ಗೆಡ್ಡೆ ಗೆಣಸುಗಳನ್ನು ತಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಸಬೇಕೆಂದರೆ, ಅವುಗಳ ಪಾಕ ವಿಧಾನ ಪರಿಚಯ ಮಾಡಬೇಕು. ಇವತ್ತಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಹೊಸ ತರಹದ ಅಡುಗೆಗಳನ್ನು ಪರಿಚಯಿಸಿದ್ದು ಸಂತಸದ ಸಂಗತಿ ಎಂದು ಪ್ರಶಂಸಿದರು.
ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆಯ ತೀರ್ಪುಗಾರ್ತಿ ಶ್ವೇತ ಮಾತನಾಡಿ, ಗೆಡ್ಡೆ ಗೆಣಸುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಸುಲಭವಾಗಿ ಬೆಳೆಯಬಹುದಾದ ಗೆಡ್ಡೆ ಗೆಣಸುಗಳನ್ನು ದಿನ ನಿತ್ಯದ ಅಡುಗೆಗಳಲ್ಲಿ ಬಳಸುವ ಮೂಲಕ ಅಪ್ವೌಷ್ಟಿಕತೆಯನ್ನು ದೂರಮಾಡಬಹುದು ಎಂದರು. ತೀರ್ಪುಗಾರರಾದ ಸೈಯದಾ ಫಿರ್ದೋಜ್, ಸೋಫಿಯಾ ಉಪಸ್ಥಿತರಿದ್ದರು.
ಸಿಹಿ ಗೆಣಸಿನ ಪಾಯಸ, ಸಿಹಿ ಉಂಡೆ, ಮೋದಕ ಮತ್ತು ಹೋಳಿಗೆ , ಪರ್ಪಲ್ ಯಾಮ್ ಮೋಮೋಸ್, ಪಾಯಸ, ಕೆಸುವಿನ ಹಲ್ವಾ, ಯೋಕೋನ್ ಬೀನ್ಸ್ ಬ್ರೆಡ್ ಸ್ಯಾಂಡ್‌ವಿಚ್, ಹುತ್ತರಿ ಗೆಣಸಿನ ಪರೋಟ, ಮರ ಗೆಣಸಿನ ಚಕ್ಕುಲಿ, ಸುವರ್ಣಗೆಡ್ಡೆಯ ನಿಪ್ಪಟ್ಟು, ಬೀಟ್ರೂಟ್ ಜಾಮ್, ಕ್ಯಾರೆಟ್ ಐಸ್ಕ್ರೀಂ, ಮತ್ತು ಹರಿಷಿಣ ಚಟ್ನಿ ಸೇರಿದಂತೆ ಹಲವಾರು ಬಗೆಯ ವೈವಿಧ್ಯಮಯ ರುಚಿಕರ ತಿಂಡಿ ತಿನಿಸುಗಳನ್ನು ಸ್ಪರ್ಧೆಗೆ ತರಲಾಗಿತ್ತು.
ಅಡುಗೆ ಸ್ಪರ್ಧೆಯಲ್ಲಿ ಪ್ರತಿಮಾ ಪಾಟೀಲ್ (ಪ್ರಥಮ), ತಿರುಮಲೇಶ್ವರಿ ವಿಠ್ಠಲ್ (ದ್ವಿತೀಯ) ಹಾಗೂ ಹರ್ಷಿತಾ ಎಂ. ಸಂತೋಷಿ (ತೃತೀಯ) ಬಹುಮಾನ ಪಡೆದರು. ಗೀತಾ ರಾವ್, ಬೀಬಿ ಜಾನ್ ಮತ್ತು ಗುಲಾಬಿ ಸಮಾಧಾನಕರ ಬಹುಮಾನ ಪಡೆದರು.