ಬೆಂಗಳೂರು: ಶಿಕ್ಷಣ ಪಡೆಯುವುದಷ್ಟೇ ವಿದ್ಯಾರ್ಥಿಗಳ ಕೆಲಸವಲ್ಲ. ಬದುಕಿನಲ್ಲಿ ಉತ್ಕೃಷ್ಟ ಸಾಧನೆ ಮಾಡಬೇಕು ಎಂಬುದನ್ನು ಮುಖ್ಯ ಗುರಿಯಾಗಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಜಯಕರ ಶೆಟ್ಟಿ ಹೇಳಿದ್ದಾರೆ.
ಜಯನಗರ ನ್ಯಾಷನಲ್ ಕಾಲೇಜಿನ 13ನೇ ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಭಾನುವಾರ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯಿದ್ದು, ಇದರಿಂದ ವ್ಯಾಪಕ ಪರಿವರ್ತನೆ ತರಲು ಸಾಧ್ಯವಿದೆ. ಮುಂದಿನ ಪೀಳಿಗೆಯ ವಿದ್ಯಾರ್ಥಿಗಳನ್ನು ಜಾಗತಿಕ ಸವಾಲುಗಳಿಗೆ ಸಜ್ಜುಗೊಳಿಸಲು ಸಹಕಾರಿಯಾಗಲಿದೆ. ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿ ನಗರ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಸ್ಪರ್ಧೆಗೆ ಅಣಿಗೊಳಿಸಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ಶಿಕ್ಷಣವೆಂದರೆ ಕೇವಲ ಪ್ರಮಾಣಪತ್ರ, ಚಿನ್ನದ ಪದಕಗಳಲ್ಲ. ನಿಮಗೆ (ವಿದ್ಯಾರ್ಥಿಗಳು) ಶಿಕ್ಷಕರು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದು, ಪಾಲಕರು ನಿಮಗಾಗಿ ಹೆಚ್ಚಿನ ತ್ಯಾಗ ಮಾಡಿದ್ದಾರೆ. ನೈತಿಕ ಶಿಕ್ಷಣ ನಿಮಗೆ ಭದ್ರ ಬುನಾದಿಯಾಗಬೇಕು. ನೀವು ಪದವಿಯನ್ನಷ್ಟೇ ಪಡೆದಿಲ್ಲ. ಬದಲಿಗೆ ಸಮಾಜದ ಅತಿದೊಡ್ಡ ಜವಾಬ್ದಾರಿಯ ಪಾಲುದಾರರಾಗುತ್ತಿದ್ದೀರಿ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಅವಕಾಶ ಬಳಸಿಕೊಳ್ಳಲಿ:
ಗಾಂಧಿನಗರದ ರಾಷ್ಟ್ರೀಯ ವಿಧಿ ವಿಜ್ಞಾನ ವಿವಿಯ ಅಧ್ಯಾಪಕರ ವಿಭಾಗದ ಮುಖ್ಯಸ್ಥ ಪ್ರೊ. ಸುಂದರಾಜ ಸೀತಾರಾಮ ಅಯ್ಯಂಗಾರ್ ಮಾತನಾಡಿ, ಅಪರಾಧ ವಿಜ್ಞಾನ ಅತ್ಯಂತ ವ್ಯಾಪಕವಾಗಿ ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಕಲ್ಪಿಸುತ್ತಿದೆ. ಇದನ್ನು ಆಸಕ್ತ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
485 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ಘಟಿಕೋತ್ಸವದಲ್ಲಿ ಕಾಲೇಜಿನ ವಿವಿಧ ವಿಭಾಗದ ಹದಿನಾರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 485 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಂ.ಕಾಂ, ಗಣಿತ, ಭೌತಶಾಸ್ತ್ರ ವಿಭಾಗದ 52 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ, ಹಾಗೂ 433 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಪಡೆದುಕೊಂಡರು.
ಸಮಾರಂಭದಲ್ಲಿ ಎಚ್‌ಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ವಿ.ವೆಂಕಟಶಿವಾ ರೆಡ್ಡಿ, ಎನ್‌ಇಎಸ್ ಆಫ್ ಕರ್ನಾಟಕ ಅಧ್ಯಕ್ಷ ಡಾ. ಎಚ್.ಎನ್.ಸುಬ್ರಮಣ್ಯ, ಪದಾಧಿಕಾರಿಗಳಾದ ಡಾ. ಬಿ.ಎಸ್.ಅರುಣ್ ಕುಮಾರ್, ಸುಧಾಕರ ಇಸ್ತೂರಿ, ತಲ್ಲಂ ಆರ್. ದ್ವಾರಕನಾಥ್, ಡಾ. ಪಿ.ಎಲ್.ವೆಂಕಟರಾಮ ರೆಡ್ಡಿ, ಪ್ರಾಂಶುಪಾಲ ಡಾ. ಪಿ.ಎಲ್.ರಮೇಶ್ ಹಾಜರಿದ್ದರು.