ಜಿಲ್ಲೆ

ಸಿಎಂ ವಿರುದ್ಧ ಹೈಕೋರ್ಟ್ ಗೆ ಅರ್ಜಿ; ಭೀಮಪ್ಪ ಗಡಾದ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ಯಾಂಪ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಉಚ್ಛ ನ್ಯಾಯಾಲಯದಲ್ಲಿ ಶೀಘ್ರ ಪ್ರಕರಣ ದಾಖಲಿಸುತ್ತೇನೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಬೆಳಗಾವಿಯಲ್ಲಿ ಏಪ್ರಿಲ್‌ 28ರಂದು ಆಯೋಜಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಸಿ.ಎಂ ಸಿದ್ದರಾಮಯ್ಯ ಅವರು, ಧಾರವಾಡ ಎಎಸ್‌ಪಿ ನಾರಾಯಣ ಭರಮನಿ ಮೇಲೆ ಕೈ ಎತ್ತಿ ಹೊಡೆಯಲು ಮುಂದಾಗಿದ್ದರು. ಈ ಘಟನೆ ಖಂಡಿಸಿ ಕ್ಯಾಂಪ್‌ ಠಾಣೆಯಲ್ಲಿ ಜೂನ್‌ 12ರಂದು ದೂರು ಕೊಟ್ಟಿದ್ದೆ. ಆದರೆ, ಪೊಲೀಸರು ಇಲ್ಲಿಯವರೆಗೂ ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್‌ ದಾಖಲಿಸದಿರುವುದು ಸರಿಯಲ್ಲ ಎಂದು ದೂರಿದರು.

ಎಫ್‌ಐಆರ್‌ ದಾಖಲಿಸದಿರುವ ಬಗ್ಗೆ ಕೇಳಿದರೆ, ನೊಂದ ವ್ಯಕ್ತಿಯೇ ನಮಗೆ ದೂರು ಕೊಟ್ಟಿಲ್ಲ. ಒಂದುವೇಳೆ ಅವರಿಂದ ದೂರು ಬಂದರೆ ನಿಯಮಾನುಸಾರ ಕ್ರಮ ಜರುಗಿಸುತ್ತೇವೆ ಎನ್ನುತ್ತಾರೆ. ಆದರೆ, ಮತ್ತೊಂದು ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್.ರವಿಕುಮಾರ್ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಎಂಬುವರು ಬೆಂಗಳೂರಿನ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ದೂರು ಕೊಡದಿದ್ದರೂ ರವಿಕುಮಾರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ ಎಂದು ಆಪಾದಿಸಿದರು.

ರವಿಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿರುವಂತೆಯ ಸಿ.ಎಂ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಇಲ್ಲದಿದ್ದರೆ ಪೊಲೀಸ್‌ ಇಲಾಖೆಯೇ ಸಿದ್ದರಾಮಯ್ಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಈ ಸಂಬಂಧ ಕ್ಯಾಂಪ್‌ ಠಾಣೆಯಲ್ಲಿ ಜುಲೈ 15ರಂದು ಮತ್ತೊಮ್ಮೆ ದೂರು ನೀಡಿದ್ದೇನೆ. ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್‌ ದಾಖಲಾಗದಿದ್ದರೆ, ನ್ಯಾಯಾಲಯದಲ್ಲಿ ಈ ಕ್ರಮ ಪ್ರಶ್ನಿಸುತ್ತೇನೆ ಎಂದರು.