ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಆರಂಭಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ಎದುರಾಗಿದ್ದ ಕೆಲ ಗೊಂದಲ ಹಾಗೂ ಸಮಸ್ಯೆಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು ಪರಿಹಾರ ಕಂಡುಕೊಂಡಿದ್ದು, 2ನೇ ದಿನವಾದ ಭಾನುವಾರ 95 ಸಾವಿರ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.
ರಜಾದಿನ ಇದ್ದರೂ ಗಣತಿದಾರರು ತಮಗೆ ನಿಗದಿ ಮಾಡಿದ್ದ ಪ್ರದೇಶಗಳಲ್ಲಿನ ಮನೆಗಳಿಗೆ ತೆರಳಿ ಕುಟುಂಬಗಳ ಮಾಹಿತಿಯನ್ನು ಕಲೆ ಹಾಕಿದರು. ಮೊಬೈಲ್ ಆ್ಯಪ್‌ನಿಂದ ಸಮಸ್ಯೆ ಉದ್ಭವಿಸದಿದ್ದರೂ, ಜನರು ನೀಡುವ ಮಾಹಿತಿಯನ್ನು ವೇಗವಾಗಿ ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಗಣತಿದಾರರಿಗೆ ಮಾಹಿತಿ ಪಡೆಯಲು ನಿಗದಿತಗಿಂತ ಹೆಚ್ಚು ಸಮಯ ಹಿಡಿದಿದೆ. ಕೆಲ ಕುಟುಂಬಗಳು ಆದಾಯ ಹಾಗೂ ಕೆಲ ಅಂಶಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಜಿಬಿಎ ವ್ಯಾಪ್ತಿಯ ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ 95,024 ಮನೆಗಳ ಸಮೀಕ್ಷೆ ನಡೆಸಿದ್ದು, ಈವರೆಗೂ ಒಟ್ಟು 1.19 ಲಕ್ಷ ಮನೆಗಳ ಸರ್ವೆ ಮುಕ್ತಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮೀಕ್ಷಾದಾರರು ಮನೆಗಳಿಗೆ ಬರುವ ವೇಳೆ ಸಮೀಕ್ಷೆಯಲ್ಲಿ ಸಹಕರಿಸಲು ಮತ್ತು ಭಾಗವಹಿಸಲು ಎಲ್ಲ ನಾಗರಿಕರಲ್ಲಿ ಅಧಿಕಾರಿಗಳು ವಿನಂತಿಸಿದ್ದಾರೆ. ನಾಗರಿಕರು ಕೂಡ ಸ್ವತಃ ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಈವರೆಗಿನ ಸಮೀಕ್ಷೆ ವಿವರ:
ಪಾಲಿಕೆ ಹೆಸರು ಮನೆಗಳ ಸಂಖ್ಯೆ
ಕೇಂದ್ರ ಪಾಲಿಕೆ 14,288
ಪೂರ್ವ ಪಾಲಿಕೆ 17,269
ಉತ್ತರ ಪಾಲಿಕೆ 31,363
ದಕ್ಷಿಣ ಪಾಲಿಕೆ 16,445
ಪಶ್ಚಿಮ ಪಾಲಿಕೆ 40,112
ಒಟ್ಟು 1,19,477