ಕಿಶೋರ್ ಕುಮಾರ್ ಪುತ್ತೂರು 
ಜಿಲ್ಲೆ

ಜಿಬಿಎ ಅಧಿಕಾರಿಯ ಮೇಲೆ ಪುಂಡರಿಂದ ಹಲ್ಲೆ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗೆ ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು ಸಾಂತ್ವನ
ಮಂಗಳೂರು: ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್‌ಪಾತ್ ಆಕ್ರಮಣ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಬಿಎ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧವರಾವ್ ಜಾಧವ್ ಅವರನ್ನು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಜು. 22ರಂದು ಭೇಟಿ ಮಾಡಿ, ಧೈರ್ಯ ಮತ್ತು ಸಾಂತ್ವನ ತುಂಬಿದರು.
ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದ ಗೃಹ ಸಚಿವರು ಸದಾ ಕಾಲ ಆರ್‌ಎಸ್ಎಸ್ ಅನ್ನು ಟೀಕಿಸುವುದು ಹಾಗೂ ಬಿಜೆಪಿಯವರನ್ನು ಗುರಿಯಾಗಿಸಿಕೊಂಡು ರಾಜಕಾರಣ ಮಾಡುವುದರಲ್ಲೇ ತಮ್ಮ ಸಂಪೂರ್ಣ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಅವರು ಮೊದಲು ತಮ್ಮ ಪೊಲೀಸ್ ಇಲಾಖೆಯ ಕಡೆ ಹಾಗೂ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಕಡೆ ಗಮನ ಹರಿಸಬೇಕು. ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಸರ್ಕಾರಿ ಅಧಿಕಾರಿಗಳ ಮೇಲೆಯೇ ಇಂತಹ ಭೀಕರ ಹಲ್ಲೆ ನಡೆಯುತ್ತಿದೆ ಎಂದರೆ, ರಾಜ್ಯದಲ್ಲಿ ಜನಸಾಮಾನ್ಯರ ಗತಿಯೇನು? ಸರ್ಕಾರ ಪುಂಡ-ಪೋಕರಿಗಳಿಗೆ ರಕ್ಷಣೆ ನೀಡುತ್ತಿದೆಯೇ ಎಂದು ಶಾಸಕರು ಪ್ರಶ್ನಿಸಿದರು.
ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಕಿಶೋರ್ ಕುಮಾರ್ ಆಗ್ರಹಿಸಿದರು.