ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ವಿತರಿಸಲಾಗುವ ಇ-ಖಾತಾ ಪ್ರಮಾಣಪತ್ರಗಳಲ್ಲಿ ಜಿಬಿಎ ಹೆಸರು ನಮೂದಾಗಲಿದೆ.
ಬಿಬಿಎಂಪಿ ಅಸ್ತಿತ್ವದಲ್ಲಿ ಇದ್ದಾಗ ಜಾರಿಗೆ ಬಂದಿರುವ ಇ-ಖಾತಾ ಪ್ರಮಾಣಪತ್ರಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಹೆಸರಿನಡಿ ವಿತರಿಸಲಾಗುತ್ತಿತ್ತು. ಈಗ 5 ಪಾಲಿಕೆಗಳು ರಚನೆಯಾಗಿರುವುದರಿಂದ ಹೊಸದಾಗಿ ವಿತರಿಸಲಾಗುವ ಇ-ಖಾತಾಗಳಿಗೆ ಜಿಬಿಎ ಎಂದು ಬದಲಾಗಲಿದೆ. ಈ ಬದಲಾವಣೆಗೆ ಶೀಘ್ರದಲ್ಲೇ ಜಾರಿಗೆ ಬರಲಿದ್ದು, ಈ ತಿಂಗಳಾಂತ್ಯದೊಳಗೆ ಅಧಿಕೃತವಾಗಿ ವಿತರಣೆಯಾಗುವ ಸಾಧ್ಯತೆ ಇದೆ.
ಸದ್ಯ ಜಿಬಿಎ ಆಗಿ ಬದಲಾವಣೆ ಆಗಿದ್ದರೂ, ಹಿಂದೆ ನೀಡಲಾದ ಬಿಬಿಎಂಪಿ ಹೆಸರಿನ ಇ-ಖಾತಾಗಳಿಗೆ ಈಗಲೂ ಮಾನ್ಯತೆ ಇದೆ. ಇದರಲ್ಲಿ ಯಾವುದೇ ಬದಲಾವಣೆ ಇರದು. ಬಿಬಿಎಂಪಿ ಹೆಸರಿದ್ದರೆ ಯಾವುದೇ ಸಮಸ್ಯೆ ಇಲ್ಲ. ಅದನ್ನು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಮಾನ್ಯ ಮಾಡಲಿವೆ ಎಂದು ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಇ-ಖಾತಾ ವ್ಯವಸ್ಥೆಯ ಸ್ಸಾಫ್ಟ್ವೇರ್ ಮೇಲ್ದರ್ಜೆಗೇರಿಸಿದ್ದು, ಸಣ್ನಪುಟ್ಟ ಬದಲಾವಣೆಗಳು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲಾಗುತ್ತದೆ. ಜತೆಗೆ ಈ ಹಿಂದೆ ಇ-ಖಾತಾ ಪಡೆಯಲು ಎದುರಿಸುತ್ತಿದ್ದ ತಾಂತ್ರಿಕ ಅಡ್ಡಿ, ಪ್ರಮಾಣಪತ್ರದಲ್ಲಿ ಹೆಸರಿನ ಅಕ್ಷರಗಳಲ್ಲಿ ತಪ್ಪಾಗಿ ನಮೂದು ಇತ್ಯಾದಿಯನ್ನು ಪರಿಹರಿಸಿಕೊಡಲಾಗುತ್ತದೆ. ಐದೂ ಪಾಲಿಕೆಗಳು ಹೊಸದಾಗಿ ರಚನೆಯಾಗಿದ್ದರೂ, ಅವುಗಳೆಲ್ಲವೂ ಗ್ರೇಟರ್ ಬೆಂಗಳೂರು ಅಡಿಯಲ್ಲಿ ಬರುವುದರಿಂದ ಜಿಬಿಎ ಮಾನ್ಯತೆ ಸಿಗಲಿದೆ. ಅಂತಹ ಪ್ರಮಾಣಪತ್ರದಲ್ಲಿ ಆಯಾ ಪಾಲಿಕೆಗಳ ಹೆಸರು ನಮೂದು ಆಗದು. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ವಿತರಿಸಿದ್ದಕ್ಕೆ ಮೊಹರಿನಲ್ಲಿ ಆಯಾ ಕಾರ್ಪೊರೇಷನ್‌ಗಳ ಮೊಹರು ಇರಲಿದೆ.
125 ರೂ. ಶುಲ್ಕ ನಿಗದಿ:
ಈ-ಖಾತಾ ಪಡೆಯಲಿಚ್ಛಿಸುವವರು ಅಗತ್ಯ ದಾಖಲಾತಿ ಸಲ್ಲಿಸಿ ಸೌಲಭ್ಯ ಪಡೆಯಬಹುದು. ಅಂತಿಮ ಇ-ಖಾತಾ ಪಡೆಯಲು 125 ರೂ. ಶುಲ್ಕ ವಿಧಿಸಲಾಗಿದೆ. ಈ ಹಿಂದೆ ಬಿಬಿಎಂಪಿಯಿಂದ ಸೌಲಭ್ಯ ಪಡೆದವರು, ತಮ್ಮ ಸ್ವತ್ತುಗಳಿಗೆ ಜಿಬಿಎ ಪ್ರಮಾಣಪತ್ರ ಪಡೆಯಲಿಚ್ಛಿಸುವವರು ಮತ್ತೆ 125 ರೂ. ಶುಲ್ಕ ನೀಡಿ ಪಡೆಯಬಹುದಾಗಿದೆ. ಆದರೆ, ಇದು ಕಡ್ಡಾಯ ಅಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲೇ ಇತ್ಯರ್ಥ:
ಬಿಬಿಎಂಪಿ ಅಸ್ತಿತ್ವದಲ್ಲಿದ್ದಆಗ ಇ-ಖಾತಾದಲ್ಲಿನ ಗಂಭೀರ ದೋಷಗಳನ್ನು ತಿದ್ದಲು ನಾಗರಿಕರು ಕೇಂದ್ರ ಕಚೇರಿಗೆ ಬರಬೇಕಿತ್ತು. ಇದರಿಂದ ಹೊರವಲಯದಲ್ಲಿದ್ದ ನಾಗರಿಕರಿಗೆ ಹಣ ಹಾಗೂ ಸಮಯ ಪೋಲಾಗುತ್ತಿತ್ತು. ಈಗ 5 ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿರುವುದರಿಂದ ಆಯಾ ಪಾಲಿಕೆ ವ್ಯಾಪ್ತಿಯಲ್ಲೇ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ. ಇಲ್ಲಿ ಸಾಧ್ಯವಾಗದವುಗಳನ್ನು ಜಿಬಿಎ ಕಂದಾಯ ಮುಖ್ಯಸ್ಥರಿಂದ ಸಲಹೆ ಪಡೆದು ಪರಿಹಾರ ಒದಗಿಸಲಾಗುತ್ತದೆ.