ಶಿರಸಿ: ಗಾಯತ್ರಿ ಮಂತ್ರ ಅತ್ಯಂತ ಸರ್ವ ಶ್ರೇಷ್ಠ, ಅದು ಅನಿವಾರ್ಯ ಎಂದು ಶ್ರೀ ಕ್ಷೇತ್ರ ರ್ಕ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಚಾತುರ್ವಸ್ಯ ವ್ರತದಲ್ಲಿ ಗುರುವಾರ ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಗಾಯತ್ರಿ ಮಂತ್ರದಿಂದ ನರ ನಾರಾಯಣನಾಗಬಹುದು, ಮನುಷ್ಯ ದೈವತ್ವ ಪಡೆಯಬಹುದು ಎಂದರು. ವಿಶ್ವರಥ ರಾಜ ವಿಶ್ವಾಮಿತ್ರ ಆದ ಕಥೆ ವಿವರಣೆ ನೀಡಿ, ಓರ್ವ ಕ್ಷತ್ರಿಯ ಬ್ರಾಹ್ಮಣ ಆಗಿ, ಬ್ರಹ್ಮ ಋಷಿ -ರಾಜ ಋಷಿ ಆಗಬಹುದು ಅಂತಾದರೆ, ಗಾಯತ್ರಿ ಮಂತ್ರದಲ್ಲಿ ಅದೇನೋ ಶಕ್ತಿ ಅಡಗಿದೆ. ಹಾಗಾಗಿ ಗಾಯತ್ರಿ ಮಂತ್ರ ಪಠಣ ಪ್ರತಿಯೊಬ್ಬರು ಮಾಡಬೇಕು, ಅದು ಅನಿವಾರ್ಯ ಕೂಡ ಹೌದು ಎಂದರು.
ಮನುಷ್ಯ ಹುಟ್ಟುವಾಗ ಸಂಸ್ಕಾರ ರಹಿತನಾಗಿ ಬರುತ್ತಾನೆ. ಅನಂತರ ಸಂಸ್ಕಾರ ಪಡೆದುಕೊಂಡು ಶ್ರೇಷ್ಠ ವ್ಯಕ್ತಿ ಆಗುತ್ತಾನೆ. ಹಾಗೆ ಸಂಸ್ಕಾರ ಪಡೆದು ಶ್ರೇಷ್ಠ ವ್ಯಕ್ತಿಯಾಗಿಸುವ ಶಕ್ತಿ ಗಾಯತ್ರಿ ಮಂತ್ರಕ್ಕಿದೆ. ಗಾಯತ್ರಿ ಮಂತ್ರ ಕಲಿಯುವ ಕಾಲಘಟ್ಟವೇ ಉಪನಯನ ಅಥವಾ ಬ್ರಹ್ಮೋಪದೇಶ. ಎಂಟನೇ ವರ್ಷಕ್ಕೆ ಉಪನಯನ ಮಾಡಬೇಕು, ಅದು ಸಾಧ್ಯ ಆಗದಿದ್ದಲ್ಲಿ ಎಂಟರಿಂದ ಹದಿನಾರರ ಒಳಗೆ ಮಾಡಬೇಕು. ಅದು ಅವರ ಅನುಕೂಲ ಅಥವಾ ಬೌದ್ಧಿಕ ಮಟ್ಟ ಅವಲಂಬನೆ ಆಗಿದೆ. ಉಪನಯನ ಮಾಡುವಾಗ ಸಮ ವರ್ಷ ಅಥವಾ ವಿಷಮ ಪ್ರಶ್ನೆ ಇಲ್ಲ ಎಂದರು.
ಗಾಯತ್ರಿ ಮಂತ್ರ ಬೋಧನೆ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಇದನ್ನು ಪಡೆದುಕೊಂಡು ಪಠಣ ಮಾಡುವ ವ್ಯಕ್ತಿ ಶ್ರೇಷ್ಠ ವ್ಯಕ್ತಿ ಆಗುತ್ತಾನೆ, ಗೆಲುವು ಪಡೆಯುತ್ತಾನೆ, ತೇಜಸ್ಸು ಪಡೆಯುತ್ತಾನೆ. ಅಂತಹ ಗಾಯತ್ರಿ ಮಂತ್ರದ ಮಹಿಮೆಯನ್ನು ವಿವರಿಸಿದರು. ಶ್ರೀ ಸುಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಬಂಧುಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.