ಜಿಲ್ಲೆ

ಹಳೇಬೀಡು ಪಟ್ಟಣದ ಅಭಿವೃದ್ಧಿಗೆ ಆದ್ಯತೆ

ಲಲಾಟಾಕ್ಷ ಎಸ್

ಹಳೇಬೀಡು: ಐತಿಹಾಸಿಕ ಹಳೇಬೀಡು ಪಟ್ಟಣವು ಯಾವುದೇ ಮೂಲಸೌಲಭ್ಯಗಳಿಂದ ವಂಚಿತವಾಗದಂತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.


ಪಟ್ಟಣದ ವಿವಿಧೆಡೆ ಸೋಮವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳೇಬೀಡಿನ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಒಳಭಾಗದ ರಸ್ತೆ ಕಾಮಗಾರಿಗೆ 2.5 ಕೋಟಿ ರೂ. ಅನುದಾನ ಒದಲಾಗಿಸಲಾಗಿದೆ. ಜಲ ಜೀವನ ಮಿಷನ್ ಯೋಜನೆಯಡಿ ವಿಧಾನಸಭಾ ಕ್ಷೇತ್ರಕ್ಕೆ 450 ಕೋಟಿ ರೂ.ದೊರಕಿದ್ದು ಅದರಲ್ಲಿ ಹಳೇಬಿಡು ಪಟ್ಟಣದ ಬೇಡಿಕೆಯನ್ನು ಪರಿಗಣಿಸಿ ಮೊದಲು ನೀರಿನ ಕೊಳವೆ ಸಂಪರ್ಕ ಕಲ್ಪಿಸಿಲಾಗುವುದು. ನಂತರ ಒಳಭಾಗದ ರಸ್ತೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಶಿಥಿಲಗೊಂಡಿದ್ದ ನಾಡಕಚೇರಿ ಕಟ್ಟಡವನ್ನು ಕೆಡವಿ ಹೊಸದಾಗಿ ನಿರ್ಮಿಸುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಹಾಗಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.


ಮುಖ್ಯರಸ್ತೆ ವಿಸ್ತರಣೆ ಸಂಬಂಧ ಕೆಲವರು ನ್ಯಾಯಾಲಯಕ್ಕೆ ಹೋಗಿ ಕಟ್ಟಡಗಳನ್ನು ಕೆಡವದಂತೆ ತಡೆಯಾಜ್ಞೆ ತರುವ ಪ್ರಯತ್ನ ಮಾಡಿದ್ದಾರೆ. ಪಟ್ಟಣದ ಜನತೆ ಅಭಿವೃದ್ಧಿ ಪರವಾಗಿದ್ದು ಕಾಮಗಾರಿಗೆ ಬೆಂಬಲವಾಗಿ ನಿಂತಿದ್ದಾರೆ. ಹಾಗಾಗಿ ಕೆಲಸ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಲಿದೆ. ರಸ್ತೆ ಬದಿ ಚರಂಡಿ ನಿರ್ಮಾಣ ಕಾರ್ಯ ಶೇ.90 ಮುಗಿದಿದ್ದು, ಇದಾದ ಬಳಿಕ ಡಾಂಬರ್ ಹಾಕುವ ಕೆಲಸ ತ್ವರಿತವಾಗಿ ಮುಂದುವರಿಯಲಿದೆ. ಎಲ್ಲ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಹೇಳಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ, ಸದಸ್ಯೆ ಚಂದ್ರಮತಿ, ಮುಖಂಡ ಬಿ.ಎಸ್.ಸೋಮಶೇಖರ್, ನಿಂಗಪ್ಪಶೆಟ್ಟಿ, ಶಿವಕುಮಾರ್ ಮತ್ತಿತರರಿದ್ದರು.