ಜಿಲ್ಲೆ

ಮಿದುಳು ಆರೋಗ್ಯ ಕಾರ್ಯಕ್ರಮ ಪ್ರಾಯೋಗಿಕ ಜಾರಿ, ದೇಶದಲ್ಲೇ ಮೊದಲ ಬಾರಿಗೆ ಪ್ರಯೋಗ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚಾಲನೆ

ಚಿಕ್ಕಬಳ್ಳಾಪುರ: ದೇಶದಲ್ಲೇ ಮೊದಲ ಬಾರಿಗೆ ‘ಕರ್ನಾಟಕ ಮಿದುಳು ಆರೋಗ್ಯ ಕಾರ್ಯಕ್ರಮ’ವನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಹಲವು ಜಿಲ್ಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದ್ದು, ಇದರಡಿ ಮಾನಸಿಕ ರೋಗಗಳ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ಕುರಿತು ವೈದ್ಯರಿಗೆ ತರಬೇತಿ ನೀಡಲಾಗುತ್ತದೆ. ಜತೆಗೆ ರೋಗಿಗಳನ್ನು ಪತ್ತೆ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತದೆ.

ನಿಮ್ಹಾನ್ಸ್ ಸಂಸ್ಥೆಯು ನೀತಿ ಆಯೋಗ ಹಾಗೂ ಆರೋಗ್ಯ ಇಲಾಖೆ ನೆರವಿನಲ್ಲಿ ಕೈಗೊಂಡಿರುವ ವಿನೂತನ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆನ್​ಲೈನ್ ಮೂಲಕ ಚಾಲನೆ ನೀಡಿದರು.

ಏನಿದು ಕಾರ್ಯಕ್ರಮ?: ಕರೊನಾ ಸಂದರ್ಭದಲ್ಲಿ ನಿಮ್ಹಾನ್ಸ್ ನೇತೃತ್ವದಲ್ಲಿ ಅನೇಕ ಸೋಂಕಿತ ರೋಗಿ ಹಾಗೂ ಕುಟುಂಬದವರ ಮಾನಸಿಕ ಆರೋಗ್ಯ ನಿರ್ವಹಣೆಗೆ ಒತ್ತು ನೀಡಲಾಗಿದ್ದು, ಕೆಲ ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಈ ಸಂಬಂಧ ಅನೇಕರಿಗೆ ಮಾನಸಿಕ ಆರೋಗ್ಯ ಆಪ್ತ ಸಮಾಲೋಚನೆ ಸೇವೆ ನೀಡಲಾಗಿದೆ. ಇದನ್ನು ಮತ್ತಷ್ಟು ಸುಧಾರಣಾ ಕ್ರಮಗಳೊಂದಿಗೆ ಮುಂದುವರಿಸಲಾಗುತ್ತಿದೆ. ಮಿದುಳಿನ ಆರೋಗ್ಯ ಇಡೀ ದೇಹದ ಒಟ್ಟು ಆರೋಗ್ಯ ಕಾಪಾಡಲು ಅಗತ್ಯವಾಗಿದೆ. ನಿಮ್ಹಾನ್ಸ್, ಜನರ ಬಳಿಯೇ ಹೋಗಿ ಆರೋಗ್ಯ ಸೇವೆ ನೀಡುವಂತಹ ಪ್ರತಿಷ್ಠಿತ ಸಂಸ್ಥೆಯಾಗಿದೆ. ಸಾಮಾನ್ಯ ಫಿಸಿಶೀಯನ್ ಕೂಡ ಮಾನಸಿಕ ಆರೋಗ್ಯ ಸೇವೆ ನೀಡುವಂತೆ ತರಬೇತಿ ನೀಡಲಾಗುತ್ತದೆ. ನವಜಾತ ಶಿಶುವಿಗೂ ಮಾನಸಿಕ ಆರೋಗ್ಯದ ತಪಾಸಣೆ ಮಾಡಿ ರೋಗ ಪತ್ತೆ ಮಾಡುವ ಅಗತ್ಯವಿದೆ. ಸಾಮಾಜಿಕ ಪರಿಸ್ಥಿತಿ, ಕೌಟುಂಬಿಕ ಸ್ಥಿತಿ ಮೊದಲಾದ ಕಾರಣಗಳಿಂದ ಅನೇಕರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು ಪ್ರತಿ ದಿನದ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರ ನಿಯಂತ್ರಣಕ್ಕೆ ಹೆಚ್ಚು ಮಾನಸಿಕ ಆರೋಗ್ಯ ತಜ್ಞರ ಅಗತ್ಯವಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 2 ಲಕ್ಷ ಮಂದಿ ವೈದ್ಯ ಶಿಕ್ಷಣ ಪಡೆಯುತ್ತಿದ್ದು, ಇವರನ್ನು ಬಳಸಿಕೊಂಡು ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ.

ನೂತನ ಕರ್ನಾಟಕ ಮಿದುಳು ಆರೋಗ್ಯ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ಮಾಹಿತಿ ಸಂಗ್ರಹಿಸಲಾಗುವುದು. ಇದರಡಿ ತಯಾರಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಬಜೆಟ್​ನಲ್ಲಿ ಹೆಚ್ಚು ಅನುದಾನ ಮೀಸಲಿಡುವಂತಾಗಲು ಕ್ರಮ ಕೈಗೊಳ್ಳಲಾಗುವುದು. | ಡಾ ಕೆ.ಸುಧಾಕರ್ ಆರೋಗ್ಯ ಸಚಿವ

ಸೋಂಕಿತರ ಆಸ್ಪತ್ರೆ ದಾಖಲಾತಿ ಕಡಿಮೆ

ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಕರೊನಾ ಪಾಸಿಟಿವಿಟಿ ದರ ಕಳೆದ ವಾರ ಶೇ.22 ಇದ್ದು, ಈ ವಾರ ಶೆ.32ಕ್ಕೆ ಏರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 3,442, ಖಾಸಗಿ ಆಸ್ಪತ್ರೆಗಳಲ್ಲಿ 1,788 ಸೇರಿ 5,230 ರೋಗಿಗಳು ದಾಖಲಾಗಿದ್ದಾರೆ. 3.62 ಲಕ್ಷ ಸಕ್ರಿಯ ಪ್ರಕರಣಗಳಲ್ಲಿ ಶೇ.2ಕ್ಕಿಂತ ಕಡಿಮೆ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಈ ಬಾರಿ ಕರೊನಾ ತೀವ್ರವಾಗಿ ಪರಿಣಾಮ ಬೀರಿಲ್ಲ. ಐದಾರು ದಿನಗಳೊಳಗೆ ಲಕ್ಷಣಗಳು ಕಡಿಮೆಯಾಗುತ್ತವೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಆದರೂ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಫೆಬ್ರವರಿ ಎರಡು, ಮೂರನೇ ವಾರದಲ್ಲಿ ಮೂರನೇ ಅಲೆ ಕಡಿಮೆಯಾಗಲಿದೆ ಎಂಬುದಾಗಿ ಐಸಿಎಂಆರ್ ಕೂಡ ಹೇಳಿದೆ. ಹೆಚ್ಚು ಎಚ್ಚರ ವಹಿಸಿದರೆ 3ನೇ ಅಲೆ ನಿಯಂತ್ರಣಕ್ಕೆ ತರಬಹುದು ಎಂದರು.

ಆರೋಗ್ಯ ಇಲಾಖೆಯಿಂದ ವಿಶೇಷ ವಿಷನ್ ವರದಿ

ಆರೋಗ್ಯ ಇಲಾಖೆಯಿಂದ ವಿಷನ್ ವರದಿ ರೂಪಿಸಲಾಗುತ್ತಿದೆ. ಮುಂದಿನ 20 ವರ್ಷಗಳಲ್ಲಿ ಕರ್ನಾಟಕ ಹೇಗೆ ಸ್ವಾಸ್ಥ್ಯ ರಾಜ್ಯವಾಗಬೇಕು. ಮೂರು ಹಂತಗಳ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಹೇಗಾಗಬೇಕೆಂದು ವರದಿ ತಯಾರಿಸಲಾಗುತ್ತದೆ. ಇದಕ್ಕೆ ರಚಿಸಿರುವ ಸಮಿತಿಯಲ್ಲಿ 30 ಹಿರಿಯ ತಜ್ಞರಿದ್ದಾರೆ. ಕಳೆದೊಂದು ವರ್ಷದಲ್ಲಿ ಸುಮಾರು 750 ತಜ್ಞರು ವರದಿ ರೂಪಿಸುವಲ್ಲಿ ಭಾಗಿಯಾಗಿದ್ದಾರೆ. ಜ.28 ಕ್ಕೆ ಸಿಎಂ ಬೊಮ್ಮಾಯಿ ವರದಿ ಬಿಡುಗಡೆ ಮಾಡಲಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದರು.