ಜಿಲ್ಲೆ

ಆರೋಗ್ಯ ತಪಾಸಣೆ ಅಗತ್ಯ

ಪ್ರವೀಣ ಉದುಸಾ ದಲಬಂಜನ್

ಕನಕಗಿರಿ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆರೋಗ್ಯ ಶಿಬಿರದ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಗೌರಿಪುರ ಗ್ರಾಪಂ ಪಿಡಿಒ ಹನುಮಂತಪ್ಪ ಹೇಳಿದರು.

ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯ ಚಿಕ್ಕತಾಂಡಾದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಗ್ರಾಪಂ ಹಾಗೂ ಆರೋಗ್ಯ ಇಲಾಖೆಯಿಂದ ಕೂಲಿಕಾರರಿಗೆ ಬುಧವಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು. ಆರೋಗ್ಯದ ಕುರಿತು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು. ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರ ತುಂಬಾ ಅನುಕೂಲವಾಗಿದೆ. ಆರೋಗ್ಯವೇ ಮಹಾಭಾಗ್ಯವಾಗಿದೆ ಎಂದರು.

ಐಇಸಿ ತಾಲೂಕು ಸಂಯೋಜಕ ಶಿವಕುಮಾರ್ ಕೆ. ಮಾತನಾಡಿ, ಉದ್ಯೋಗ ಖಾತರಿ ಕೂಲಿ ಮೊತ್ತ 2025 ಏ.1ರಿಂದ 349 ರಿಂದ 370 ರೂ.ಗೆ ಹೆಚ್ಚಳವಾಗಿದೆ. ಕೂಲಿಕಾರರು ಗ್ರಾ.ಪಂಗೆ ಕೆಲಸದ ಬೇಡಿಕೆ ಸಲ್ಲಿಸಬೇಕು. ಆಗ ಕೆಲಸ ಸಿಗಲಿದೆ. ಉದ್ಯೋಗ ಖಾತರಿ ಯೋಜನೆಯಡಿ ವರ್ಷಕ್ಕೆ 100 ಮಾನವ ದಿನಗಳ ಕೆಲಸ ಮಾಡಲು ಅವಕಾಶವಿದೆ. ಯಾರೂ ಗುಳೆ ಹೋಗದೆ ನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ತಾಂತ್ರಿಕ ಸಂಯೋಜಕ ಸಯ್ಯದ್ ತನ್ವೀರ್ ಮಾತನಾಡಿ, ಕೂಲಿಕಾರರಿಗೆ ಬೇಸಿಗೆ ಹಿನ್ನೆಲೆಯಲ್ಲಿ ಕೆಲಸದಲ್ಲಿ ಶೇ.30 ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಕೂಲಿಕಾರರಿಗೆ ಬಿ.ಪಿ., ಶುಗರ್ ಇತರರ ರೋಗಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಗ್ರಾಪಂ ಸದಸ್ಯರಾದ ಅಮರೇಶ್ ಚವ್ಹಾಣ್, ಕಾರ್ಯದರ್ಶಿ ಶಿವರಾಜ್ ಪಾಟೀಲ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ಭಾಗ್ಯ, ಆಶಾ ಕಾರ್ಯಕರ್ತೆ ಉಮಾದೇವಿ, ಡಿಇಒ ಮೋಹನ್, ಗ್ರಾಮ ಕಾಯಕ ಮಿತ್ರರಾದ ಹುಲಿಗೆಮ್ಮ ಇದ್ದರು.