ಗೌರಿಬಿದನೂರು ನಗರಸಭೆ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ರೀದ್ ಜತೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹಾಗೂ ಪೌರಾಯುಕ್ತೆ ಗೀತಾ. 
ಜಿಲ್ಲೆ

ಕೆಎಚ್‌ಪಿ ಬಣಕ್ಕೆ ಗೌರಿಬಿದನೂರು ನಗರಸಭೆ

ಗೌರಿಬಿದನೂರು ನಗರಸಭೆ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ರೀದ್ ಜತೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹಾಗೂ ಪೌರಾಯುಕ್ತೆ ಗೀತಾ.

ಲಕ್ಷ್ಮೀನಾರಾಯಣ್ ಅಧ್ಯಕ್ಷ, ಫರೀದ್ ಉಪಾಧ್ಯಕ್ಷ- ಗದ್ದುಗೆಗೇರಲು ಕಾಂಗ್ರೆಸ್ ವಿಲವಿಲ- ‘ಕೈ’ಕೊಟ್ಟ ತಂತ್ರಗಾರಿಕೆ



ಗೌರಿಬಿದನೂರು: ಗೆಲ್ಲಲ್ಲು ಬೇಕಾದ ಅಗತ್ಯ ಸದಸ್ಯರ ಬಲವಿದ್ದರೂ ನಗರಸಭೆ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ನಿರೀಕ್ಷೆಯಂತೆ ಎರಡನೇ ಬಾರಿಗೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಬಣದ ಪಾಲಾಗಿದೆ. ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ್ ಹಾಗೂ ಉಪಾಧ್ಯಕ್ಷರಾಗಿ ರೀದ್ ವಿರೋಧಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಗೆಲುವು ಸಾಧಿಸಿದರು.
ಮೂವತ್ತೊಂದು ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ನ 15 ಸದಸ್ಯರಿದ್ದಾರೆ. ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಹಂಚಿಕೆ ಮಾಡಿಕೊಳ್ಳಬಹುದಿತ್ತು. ಆದರೆ, ಶಾಸಕ ಪುಟ್ಟಸ್ವಾಮಿಗೌಡರ ಬಣವನ್ನು ಅಧಿಕಾರದಿಂದ ದೂರವಿರಿಸಲೇಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಬೆಂಬಲ ಪಡೆದು ಅಧಿಕಾರ ಹಿಡಿಯುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ನಡೆಸಿತು. ಆದರೆ, ಕಾಂಗ್ರೆಸ್‌ನ ಇಬ್ಬರು ಸದಸ್ಯರೇ ಶಾಸಕರ ಬಣಕ್ಕೆ ಬೆಂಬಲ ಸೂಚಿಸಿದರು. ಜೆಡಿಎಸ್ - ಬಿಜೆಪಿ ಸದಸ್ಯರ ಬೆಂಬಲ ಪಡೆದ ಶಾಸಕರ ಬಣ ವಿಜಯ ಪತಾಕೆ ಹಾರಿಸಿದರೆ ಕಾಂಗ್ರೆಸ್ ಪಕ್ಷ ನಡೆಸಿದ ಪ್ರಯತ್ನಗಳು ವಿಫಲಗೊಂಡವು.


ಕಾಂಗ್ರೆಸ್‌ಗೆ ಸೋಲು

ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ಬಣದಿಂದ 28ನೇ ವಾರ್ಡ್ ಸದಸ್ಯ ಲಕ್ಷ್ಮೀನಾರಾಯಣ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 15ನೇ ವಾರ್ಡ್ ಸದಸ್ಯ ಫರೀದ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ 29ನೇ ವಾರ್ಡ್‌ನ ಸುಬ್ಬರಾಜು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 12ನೇ ವಾರ್ಡ್‌ನ ಅಮರನಾಥ್ ನಾಮಪತ್ರ ಸಲ್ಲಿಸಿದ್ದರು. 17 ಮತ ಪಡೆದ ಲಕ್ಷ್ಮೀನಾರಾಯಣ್ ಹಾಗೂ 16 ಮತ ಪಡೆದ ಫರೀದ್ ಗೆಲುವು ಸಾಧಿಸಿದರು. ಸುಬ್ಬರಾಜು ಹಾಗೂ ಅಮರನಾಥ್ ತಲಾ 13 ಮತಗಳನ್ನು ಪಡೆದು ಪರಾಜಯಗೊಂಡರು.
ಪಕ್ಷೇತರರ ಕೈಹಿಡಿದ ಸದಸ್ಯರು: 11ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಪುಣ್ಯವತಿ ಜಯಣ್ಣ ಹಾಗೂ 24ನೇ ವಾರ್ಡ್‌ನ ಜೆಡಿಎಸ್ ಸದಸ್ಯೆ ಸುಬ್ಬಮ್ಮ ಚುನಾವಣೆಗೆ ಗೈರು ಹಾಜರಾಗಿದ್ದರು. 9ನೇ ವಾರ್ಡ್‌ನ ಬಿಜೆಪಿಯ ಮಾರ್ಕೆಟ್ ಮೋಹನ್, 28ನೇ ವಾರ್ಡ್‌ನ ಸಾವಿತ್ರಮ್ಮ ಹಾಗೂ 8ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಮಂಜುಳಮ್ಮ ಮತ್ತು 22ನೇ ವಾರ್ಡ್‌ನ ಗಿರೀಶ್ ಲಕ್ಷ್ಮೀನಾರಾಯಣ್ ಬೆಂಬಲಿಸಿದರು. ಶಾಸಕರ ಬಣದ 12 ಸದಸ್ಯ ಬಲದ ಜತೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ ಎರಡು ಮತಗಳು ಹಾಗೂ ಶಾಸಕರ ಮತ ಸೇರಿ 17 ಮತಗಳೊಂದಿಗೆ ಜಯಸಾಧಿಸಿ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು. ಅಧ್ಯಕ್ಷ ಸ್ಥಾನಕ್ಕೆ ಶಾಸಕರ ಬಣದ ಅಭ್ಯರ್ಥಿ ಪರ ಮತ ಚಲಾಯಿಸಿದ ಸದಸ್ಯ ಮಾರ್ಕೆಟ್ ಮೋಹನ್, ಉಪಾಧ್ಯಕ್ಷ ಸ್ಥಾನಕ್ಕೆ ಫರೀದ್‌ಗೆ ಮತ ಚಲಾಯಿಸಲಿಲ್ಲ. ಅಧಿಕ ಮತ ಪಡೆದವರನ್ನು ಅಧ್ಯಕ್ಷ - ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಅಶ್ವಿನ್‌ಘೋಷಿಸಿದರು.

ಸಂಸದರ ಗೈರು
ಸಂಸದ ಡಾ.ಕೆ. ಸುಧಾಕರ್‌ಗೆ ನಗರಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ ವಿದ್ದರೂ ಅವರು ಹಾಜರಾಗಿರಲಿಲ್ಲ. ಕಾಂಗ್ರೆಸ್ ಹಾಗೂ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಇಬ್ಬರೂ ರಾಜಕೀಯ ವಿರೋಧಿಗಳಾದ ಹಿನ್ನೆಲೆಯಲ್ಲಿ ಮತದಾನಕ್ಕೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯಗೆ ಬೆಂಬಲ ಸೂಚಿಸಿದ್ದರು. ಆದರೆ, ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಹ್ವಾನ ಬರಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಮೈತ್ರಿಯ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಕೊನೇ ಹಂತದವರೆಗೂ ಯಾವುದೇ ಸೂಚನೆ ಸಿಗಲಿಲ್ಲ. ಆದರೆ, ನಗರದ ಅಭಿವೃದ್ಧಿ ದೃಷ್ಟಿ ಹಾಗೂ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಬೇಕೆಂಬ ಆಶಯದೊಂದಿಗೆ ಬೆಂಬಲ ಕೋರದಿದ್ದರೂ ಬಿಜೆಪಿ ಸದಸ್ಯರು ತಮ್ಮ ವಿವೇಚನೆಯಂತೆ ಶಾಸಕರ ಬಣದ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು.

ಅಧಿಕಾರ ಅನಿವಾರ್ಯ ಆಗಿತ್ತು
ಬೇರೆಯವರ ಕೈಗೆ ಅಧಿಕಾರ ಹೋದರೆ ನಗರದ ಅಭಿವೃದ್ಧಿ ಕುಂಠಿತವಾಗುತ್ತಿತ್ತು. ಆದ್ದರಿಂದ ನಗರದ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯಲ್ಲಿ ಅಧಿಕಾರ ಹಿಡಿಯುವುದು ಅನಿವಾರ್ಯವಾಗಿತ್ತು. ನಮ್ಮ ಮುಖಂಡರು ಹಾಗೂ ಸದಸ್ಯರ ಒತ್ತಡಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಿ ಸಫಲರಾಗಿದ್ದೇವೆ ಎಂದ ಶಾಸಕ ಪುಟ್ಟಸ್ವಾಮಿಗೌಡ, ನೂತನ ಅಧ್ಯಕ್ಷ - ಉಪಾಧ್ಯಕ್ಷರು ಯಾವುದೇ ಕಪ್ಪುಚುಕ್ಕಿ ಬಾರದಂತೆ ಆಡಳಿತ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕಾಣೆಯಾಗಿದ್ದವರು ಪತ್ತೆ
ನನ್ನ ಪುತ್ರ ಕಾಣೆಯಾಗಿದ್ದಾನೆ ಎಂದು 22ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಗಿರೀಶ್ ಅವರ ತಂದೆ ಬಲರಾಂ ಸೋಮವಾರ ಬೆಳಗ್ಗೆಯಷ್ಟೇ ನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ವಿರೋಧಿ ಪಾಳಯದವರು ಅಪಹರಿಸಿರಬಹುದು ಎಂದು ಶಂಕೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ಗಿರೀಶ್ ಚುನಾವಣೆ ವೇಳೆಗೆ ಆಗಮಿಸಿ ಕಾಂಗ್ರೆಸ್ ವಿರುದ್ಧ ಶಾಸಕರ ಬಣದ ಪರ ಮತ ಚಲಾಯಿಸಿದರು.
ವಿಜಯೋತ್ಸವ
ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಬೆಂಬಲಿಗರು ನಗರಸಭೆ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಗರ ಸೇರಿ ಗ್ರಾಮೀಣ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಶಾಸಕರ ಬಣದ ಕಾರ್ಯಕರ್ತರು ಜಮಾಯಿಸಿದ್ದರು. ಶಾಸಕರಿಗೆ ಜೈಕಾರ ಕೂಗಿದರು. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.