ಹೊನ್ನಾಳಿ: ಈ ಬಾರಿ ಗೌರಿ ಗಣೇಶ ಹಬ್ಬವನ್ನು ಎರಡು ದಿನ ಆಚರಿಸಲಾಯಿತು. ಕೆಲ ಗೊಂದಲದ ಕಾರಣದಿಂದಾಗಿ ಕೆಲವರು ಗೌರಿ,ಗಣೇಶನನ್ನು ಸೋಮವಾರ ಪ್ರತಿಸ್ಠಾಪಿಸಿದರೆ, ಇನ್ನೂ ಕೆಲವರು ಮಂಗಳವಾರ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿದರು.
ಬರ ಪರಿಸ್ಥಿತಿ ನಡುವೆಯೂ ತಾಲೂಕಿನಾದ್ಯಂತ ಗಣೇಶ ಚತುರ್ಥಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕೆಲವರು ಸೋಮವಾರ ಪ್ರತಿಷ್ಠಾಪಿಸಿ ಆ ದಿನವೇ ವಿಸರ್ಜನೆ ಮಾಡಿದರೆ, ಇನ್ನೂ ಕೆಲವರು ಮಂಗಳವಾರ ಪ್ರತಿಷ್ಠಾಪಿಸಿ ಅಂದೇ ವಿಸರ್ಜನೆ ಮಾಡಿದರು.
ಹಲವಾರು ಗ್ರಾಮಗಳಲ್ಲಿ ಮೂರು ದಿನ, ಐದು, ಏಳು, ಒಂಭತ್ತು ಹಾಗೂ 11 ದಿನಕ್ಕೆ ವಿಸರ್ಜನೆ ಮಾಡಲು ತೀರ್ಮಾನಿಸಿದ್ದಾರೆ.
ಪಟ್ಟಣದ ಹಳದಮ್ಮ ದೇವಾಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾ ಗೌರಿ ಗಣೇಶನನ್ನು ಅ.1ರಂದು ವಿಸರ್ಜಿಸಲಾಗುತ್ತದೆ.
ಸೋಮವಾರ ಪಟ್ಟಣದ ಕೋಟೆ ಗಣೇಶ ಪೆಂಡಾಲ್, ನೀಲಕಂಠೇಶ್ವರ, ದುರ್ಗಿಗುಡಿ ವೃತ್ತ ಹಾಗೂ ತಾಲೂಕಿನ ಕೆಲವು ಭಾಗಗಳಲ್ಲಿ ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಯಿತು. ಪಟ್ಟಣದ ಹಳದಮ್ಮ ದೇವಸ್ಥಾನದಲ್ಲಿ ಮಂಗಳವಾರ ಹಿಂದು ಮಹಾಗೌರಿ ಗಣೇಶ ಪ್ರತಿಷ್ಠಾಪಿಸಿದರು.