ಜಿಲ್ಲೆ

ಗೌರಿ ಹಬ್ಬ ಆಚರಣೆ ಅದ್ಭುತವಾಗಿ ನಿರೂಪಣೆ: ವಿದ್ವಾಂಸ ಡಾ.ಎನ್.ಎಸ್.ತಾರಾನಾಥ್ ಅಭಿಮತ

ಮೈಸೂರು: ಬೆಂಗಳೂರಿನ ಸುಂದರ ಪ್ರಕಾಶನದಿಂದ ಹೊರತಂದಿರುವ ಹಿರಿಯ ಪತ್ರಕರ್ತ ಗೌರಿ ಸತ್ಯ ಅವರ ‘ಗೌರಿಯ ನಂಟು, ಈ ಮನೆತನಕ್ಕೆ’ ಕೃತಿ ಬಿಡುಗಡೆ ಮಾಡಲಾಯಿತು.
ನಗರದ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿದ ವಿದ್ವಾಂಸ ಡಾ.ಎನ್.ಎಸ್.ತಾರಾನಾಥ್ ಅವರು, ಅರಸು ಸಮುದಾಯ ಹಾಗೂ ಅರಮನೆಯಲ್ಲಿ ನಡೆಯುತ್ತಿದ್ದ ಗೌರಿ ಪೂಜೆಯ ವಿವರ ಹಾಗೂ ತಮ್ಮ ಕುಟುಂಬದೊಂದಿಗೆ ಪೂಜೆ ನಡೆದು ಬಂದ ನಂಟನ್ನು ಸತ್ಯ ಅವರು ಸಂಶೋಧನೆ ನಡೆಸಿ ದಾಖಲೆ ಸಹಿತ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚು ಜನರಿಗೆ ತಿಳಿಯದೆ ಅಜ್ಞಾತವಾಗಿದ್ದ ಗೌರಿ ಹಬ್ಬದ ಆಚರಣೆಯನ್ನು ಅದ್ಭುತವಾಗಿ ನಿರೂಪಿಸಿದ್ದಾರೆ. ಈ ಪುಸ್ತಕದಲ್ಲಿ 13 ವಿಭಾಗಗಳಿದ್ದು, ಮೊದಲ ಆರು ಭಾಗದಲ್ಲಿ ಗೌರಿ ಹಬ್ಬ, ಅರಮನೆಯ ನಂಟು, ಗೌರಿ ಪೂಜೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಬರೆದಿದ್ದಾರೆ. ಸತ್ಯ ಅವರ ಕುಟುಂಬ ಕೂಡ ಅರಮನೆ ನಂಟಿನೊಂದಿಗೆ, ಪ್ರವಾಸೋದ್ಯಮ, ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದೆ ಎಂದು ಹೇಳಿದರು.
ನಾಡೋಜ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಮೊದಲು ನಾನು ಮುಲಕನಾಡು ಸಮುದಾಯದ ಕುರಿತು ಕೃತಿ ಬರೆಯಲು ಮುಂದಾದಾಗ ಮಾಹಿತಿಗಾಗಿ ಅನೇಕರನ್ನು ಸಂಪರ್ಕಿಸಿದ್ದು ಉಂಟು. ವಿವಿಧ ಆತ್ಮಕಥನ, ಜೀವನ ವೃತ್ತಾಂತ, ಸಂವಾದ, ಸಂದರ್ಶನ, ಸಂಪರ್ಕದಿಂದ ಒಂದು ಹೊಸ ಜಗತ್ತನ್ನು ಕಂಡುಕೊಂಡೆ. ನಾವು ಈಗ ಏನಾಗೀದೇವೋ ಅದಕ್ಕೆ ನಮ್ಮ ಹಿರಿಯರ ಸಾಧನೆ, ಕಷ್ಟ, ಶ್ರಮ ಎಲ್ಲವೂ ಕಾರಣವಾಗಿದ್ದು ಅವರು ಇಲ್ಲದಿದ್ದರೆ ನಾವು ಇರುತ್ತಿರಲಿಲ್ಲ. ಅದೇ ಕಾರ್ಯವನ್ನು ಗೌರಿ ಸತ್ಯ ಅವರು ಸಹ ಮಾಡಿರುವುದು ಇದರಿಂದ ತಿಳಿಯುತ್ತದೆ ಎಂದರು.
ಕೃತಿ ರಚಿಸಿರುವ ಗೌರಿ ಸತ್ಯ ಅವರು ಮಾತನಾಡಿ, ಅನೇಕ ಹುಡುಕಾಟ, ಹಲವರ ಸಂಪರ್ಕದಿಂದ ಮಾಹಿತಿ ಕಲೆಹಾಕಿ ಈ ಕೃತಿ ರಚಿಸಲಾಗಿದೆ. ಪುಸ್ತಕ ಬರೆಯಲು ಸುದೀರ್ಘ 25 ವರ್ಷಗಳು ಸಂಶೋಧನೆ ನಡೆಸಿದೆ ಎಂದು ಹೇಳಿದರು.