ಟಿ.ರಾಮಚಂದ್ರ ಕೊಂಡ್ಲಹಳ್ಳಿ
ಗೌರಸಮುದ್ರ ಗ್ರಾಮದ ಭಕ್ತಾಧಿಗಳ ಆರಾಧ್ಯ ದೇವತೆ ಮಾರಮ್ಮ ದೇವಿಯ ಸುಕ್ಷೇತ್ರ 500 ವರ್ಷಗಳ ಇತಿಹಾಸ ಹೊಂದಿದೆ.
ಈ ದೇಗುಲವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ವರ್ಷದಲ್ಲಿ 20 ರಿಂದ 25 ಲಕ್ಷ ರೂ. ಆದಾಯ ಸಂಗ್ರಹವಾಗಲಿದೆ. ಆದರೂ ಮಾರಮ್ಮದೇವಿ ದೇವಸ್ಥಾನದಲ್ಲಿ ಮೂಲ ಸೌಕರ್ಯ ಮರಿಚೀಕೆಯಾಗಿದೆ.
ಶ್ರಾವಣ ಮಾಸದ ಮೊದಲನೇ ವಾರದಲ್ಲಿ ದೇವಿ ಜಾತ್ರೆ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ಆರಾಧನೆಗೆ ಆಗಮಿಸಲಿದ್ದಾರೆ. ದೇವಸ್ಥಾನದಲ್ಲಿ ಸೌಕರ್ಯ ಇಲ್ಲದೆ ಇರುವುದು, ಭಕ್ತರ ಚಿಂತೆಗೆ ಕಾರಣವಾಗಿದೆ.
ದತ್ತಿ ಇಲಾಖೆ ವ್ಯಾಪ್ತಿಗೆ ದೇಗುಲ ಸೇರಿದ್ದರೂ ಶುದ್ಧ ಕುಡಿಯುವ ನೀರಿಲ್ಲ. ಶೌಚಗೃಹಗಳಿಲ್ಲ. ದೇಗುಲಕ್ಕೆ ಆಗಮಿಸುವ ಭಕ್ತರು ಬಯಲಿಗೆ ಬಹಿರ್ದೆಸೆಗೆ ತೆರಳಿ ಸುತ್ತ-ಮುತ್ತಲ ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾರೆ.
ಪ್ರತಿ ಮಂಗಳವಾರ, ಶುಕ್ರವಾರ 3 ಸಾವಿರ ಭಕ್ತರು ದೇಗುಲಕ್ಕೆ ಬಂದು ವಿಶೇಷ ಪೂಜೆ ಕೈಗೊಳ್ಳುತ್ತಾರೆ. ವಸತಿ ವ್ಯವಸ್ಥೆಯಿಲ್ಲದೆ ಭಕ್ತರು ರಸ್ತೆಯಲ್ಲಿಯೇ ಬಿಡಾರ ಹೂಡುತ್ತಿದ್ದಾರೆ.
ಬಸ್ ತಂಗುದಾಣಗಳಿಲ್ಲ. ಭಕ್ತರಿಗೆ ಆರೋಗ್ಯ ಸಮಸ್ಯೆಯ ನಿವಾರಣೆಗೆ ಪ್ರಥಮ ಚಿಕಿತ್ಸಾ ಘಟಕ ಇಲ್ಲದಿರುವುದರಿಂದ 15 ಕಿ.ಮೀ. ದೂರದ ಬೇಡರೆಡ್ಡಿಹಳ್ಳಿ ಅಥವಾ 40 ಕಿ.ಮೀ. ದೂರವಿರುವ ಚಳ್ಳಕೆರೆಗೆ ಹೋಗಬೇಕಿದೆ.
ಕಳ್ಳರ ಹಾವಳಿ: ದೇವಸ್ಥಾನದ ಸುತ್ತ-ಮುತ್ತ ಕಳ್ಳರ ಹಾವಳಿ ಹೆಚ್ಚಾಗಿದೆ. ಮೊಬೈಲ್, ಪರ್ಸ್ ಇತರ ವಸ್ತುಗಳನ್ನು ಭಕ್ತರಿಂದ ಕಳ್ಳರು ಕದಿಯುತ್ತಿದ್ದಾರೆ.
ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಸಮೀಪದಲ್ಲಿ ಪೊಲೀಸ್ ಉಪಠಾಣೆ ಸ್ಥಾಪನೆ ಅನಿವಾರ್ಯವಾಗಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕಿದೆ.
ಈ ಸಂಬಂಧ ಗ್ರಾಮಸ್ಥರು, ಭಕ್ತರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಮಾತ್ರ ಶೂನ್ಯ.
ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗೌರಸಮುದ್ರ ಪುಣ್ಯಕ್ಷೇತ್ರ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳ. ಇದರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು.ಎನ್.ವೈ.ಗೋಪಾಲಕೃಷ್ಣ, ಶಾಸಕ, ಮೊಳಕಾಲ್ಮೂರು ಗೌರಸಮುದ್ರ ಮಾರಮ್ಮ ರಾಜ್ಯದಲ್ಲಿಯೇ ಖ್ಯಾತಿ ಗಳಿಸಿದೆ. ಇಲ್ಲಿ ಜಾತ್ರೆ ಆರಂಭ ಬಳಿಕ ಬಯಲುಸೀಮೆ ಪ್ರತಿ ಊರು, ಪಟ್ಟಣ, ನಗರದಲ್ಲಿ ಸರಣಿ ರೀತಿ ಒಂದು ತಿಂಗಳು ಕಾಲ ಉತ್ಸವ ನಡೆಯಲಿದೆ. ಅತ್ಯಂತ ಶಕ್ತಿ ದೇವತೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಲು ಮಂಗಳವಾರ, ಶುಕ್ರವಾರ ಸಾವಿರಾರು ಮಂದಿ ಆಗಮಿಸುತ್ತಾರೆ. ಇಲ್ಲಿ ಮೂಲ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ.ಟಿ.ಶಶಿಕುಮಾರ್, ಗ್ರಾಪಂ ಸದಸ್ಯ, ಗೌರಸಮುದ್ರ