ಜಿಲ್ಲೆ

ಜಿ.ಎ.ಯು.ಸಿ.ಜಿ. ಅಸೋಸಿಯೇಷನ್​ನಿಂದ ಉಚಿತ ಆರೋಗ್ಯ ಶಿಬಿರ ಆಯೋಜನೆ

ಬೆಂಗಳೂರು: ಇಂದಿನ ಒತ್ತಡ ಬದುಕು ಮನುಷ್ಯನ ಆರೋಗ್ಯವನ್ನು ಹದಗೆಡಿಸುತ್ತಿದೆ. ಹೀಗಾಗಿ ಎಲ್ಲರೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​ ಸಲಹೆ ನೀಡಿದ್ದಾರೆ.

ಜಿಎಯುಸಿಜಿ ಅಸೋಸಿಯೇಷನ್​ ಮಿಲ್ಲರ್ಸ್​ ರಸ್ತೆಯ ಮಣಿಪಾಲ್​ ಆಸ್ಪತ್ರೆ ಮತ್ತಿತರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಶ್ರೀರಾಮಪುರದಲ್ಲಿರುವ ಅಸೋಸಿಯೇಷನ್​ನ ಸಭಾಂಗಣದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರ್ಥಿಕ ಸಮಸ್ಯೆ ಹೊಂದಿರುವ ಸಾಕಷ್ಟು ಜನರು ಆರೋಗ್ಯ ಪರೀಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಎಯುಸಿಜಿ ಅಸೋಸಿಯೇಷನ್​ ಆಯೋಜಿಸಿರುವ ಶಿಬಿರ ಸಮಾಜಮುಖಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚಾಗುತ್ತಿರುವ ಡೆಂಗ್ಯೂ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಸುತ್ತಮುತ್ತಲ ಪ್ರದೇಶ, ಮನೆಯ ವಠಾರ ಮುಂತಾದಲ್ಲೆಲ್ಲ ನೀರು ನಿಲ್ಲದಂತೆ ಜಾಗರೂಕತೆ ವಹಿಸಿ ಎಂದು ಸೂಚಿಸಿದರು.

ಶಿಬಿರದಲ್ಲಿ ನೇತ್ರ, ದಂತ, ಹೃದಯ ತಪಾಸಣೆ ಸೇರಿ ರಕ್ತ ಪರೀಕ್ಷೆ, ಇಸಿಜಿ ಇತ್ಯಾದಿ ಪರೀಕ್ಷೆಗಳನ್ನು ನಡೆಸಿ, ಉಚಿತವಾಗಿ ಔಷಧ ವಿತರಿಸಲಾಗಿದೆ. 600ಕ್ಕೂ ಅಧಿಕ ಮಂದಿ ಆರೋಗ್ಯ ಪರೀಕ್ಷಿಸಿಕೊಂಡಿದ್ದು, 150ಕ್ಕೂ ಅಧಿಕ ಜನರು ಉಚಿತವಾಗಿ ಕನ್ನಡಕ ಪಡೆದುಕೊಂಡರು.

ಮಾರುತಿ ಮೆಡಿಕಲ್ಸ್​ ಮಾಲೀಕ ಮಹೇಂದ್ರ ಮುನ್ನೋತ್​, ಮಣಿಪಾಲ್​ ಆಸ್ಪತ್ರೆ ವೈದ್ಯ ಡಾ.ಸಾಯಿಕಿರಣ್​, ಲಯನ್ಸ್​ ಕೇಶವಮೂರ್ತಿ, ವೈದ್ಯ ಡಾ.ಎನ್​.ಎಸ್​. ಕೃಷ್ಣ ಮೂರ್ತಿ, ಅಸೋಸಿಯೇಷನ್​ ಅಧ್ಯಕ್ಷ ಡಾ.ಐ.ಕೆ. ರಾತಣ್ಣವರ್​, ಕಾರ್ಯದರ್ಶಿಗಳಾದ ಡಾ.ಮಂಜುಳಾ ಜಗದೀಶ್​, ಡಾ.ಎಚ್​.ಎಸ್​. ಶಿವಪ್ರಸಾದ್​ ಇತರರಿದ್ದರು.

ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢ ಹೊಂದಲು ವ್ಯಾಯಾಮ ಸಹಕಾರಿಯಾಗುತ್ತದೆ. ಇದರಿಂದ ದೇಹದಲ್ಲಿ ಚೈತನ್ಯ ವೃದ್ಧಿಯಾಗುತ್ತದೆ. ಸರಳ ವ್ಯಾಯಾಮಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಬಹುದು. ಜಿಎಯುಸಿಜಿ ಅಸೋಸಿಯೇಷನ್​ ಆಯೋಜಿಸಿರುವ ಆರೋಗ್ಯ ತಪಾಸಣೆ ಶಿಬಿರ ಉತ್ತಮ ಕಾರ್ಯ.
-ಎಸ್​. ಸುರೇಶ್​ ಕುಮಾರ್​, ಶಾಸಕ