ಉಳ್ಳಾಲ: ಮಂಜನಾಡಿಯ ಖಂಡಿಗ ಎಂಬಲ್ಲಿ ನಡೆದ ಗ್ಯಾಸ್ ದುರಂತದಲ್ಲಿ ತಾಯಿ ಮತ್ತು ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಆದರೆ ಘಟನೆ ನಡೆದ ದಿನದಿಂದ 21 ದಿನ ಗಾಯಗೊಂಡಿದ್ದ ವಿದ್ಯಾರ್ಥಿಗಳಿಗಾಗಿ ಮೊಂಟೆಪದವು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಕಾಳಜಿ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.
ಡಿಸೆಂಬರ್ 8ರಂದು ಮಂಜನಾಡಿಯ ಖಂಡಿಗದಲ್ಲಿ ನಡೆದಿದ್ದ ಗ್ಯಾಸ್ ದುರಂತದಲ್ಲಿ ತಾಯಿ ಮತ್ತು ಮೂವರು ಮಕ್ಕಳು ಗಂಭೀರ ಸುಟ್ಟ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಕ್ಕಳು ಮೊಂಟೆಪದವು ಕರ್ನಾಟಕ ಪಬ್ಲಿಕ್ ವನ್ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ದುರಂತದ ಬಗ್ಗೆ ಮಾಹಿತಿ ಪಡೆದ ಶಾಲೆಯ ಉಪಪ್ರಾಂಶುಪಾಲ ಸಂತೋಷ್ ಅವರು ಶಾಲೆ ಬಿಟ್ಟ ಬಳಿಕ ಆಸ್ಪತ್ರೆಗೆ ತೆರಳಿ ಮಕ್ಕಳಿಗೆ ಧೈರ್ಯ ತುಂಬಿದ್ದರು. ಚಿಕಿತ್ಸೆಗೆ ಚರ್ಮದ ಅವಶ್ಯಕತೆ ಬಗ್ಗೆ ವೈದ್ಯರು ತಿಳಿಸಿದಾಗ ವೈಯುಕ್ತಿವಾಗಿಯೂ, ಶಾಲಾ ಮಕ್ಕಳು, ಶಿಕ್ಷಕ ವರ್ಗದಿಂದ ಹಣ ಸಂಗ್ರಹಿಸಿ ನೀಡಿದ್ದರು. ಅಲ್ಲದೆ ಶಿಕ್ಷಣ ಇಲಾಖೆಯ ಡಿಡಿಪಿಐ ವೆಂಕಟೇಶ್ ಪಟಗಾರ್ ಅವರನ್ನು ಆಸ್ಪತ್ರೆಗೆ ಕರೆತಂದು ಮಕ್ಕಳ ಚಿಕಿತ್ಸೆಗಾಗಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಿದ್ದರು.
ಮಕ್ಕಳ ಆರೋಗ್ಯಕ್ಕಾಗಿ ಪ್ರತಿದಿನ ಶಾಲೆಯಲ್ಲಿ ಇತರ ಮಕ್ಕಳಿಂದ ಪ್ರಾರ್ಥನೆ ಮಾಡಿಸುತ್ತಿದ್ದರು. ಆದರೂ ಘಟನೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ತನ್ನ ಶಾಲೆಯ ವಿದ್ಯಾರ್ಥಿನಿಯರು ಮೃತಪಟ್ಟಾಗ ಅವರ ಶವ ಸಂಸ್ಕಾರದ ಕೊನೆಯವರೆಗೂ ಇದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಜತೆಗೆ ಶಾಲೆಯ ಶಿಕ್ಷಕರ ಮಾನವೀಯ ಕಾಳಜಿಯೂ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.