ಪಡುಬಿದ್ರಿ: ಇಲ್ಲಿನ ಪಾದೆಬೆಟ್ಟು ಗ್ರಾಮದಲ್ಲಿರುವ ಗ್ಯಾಸ್ ಗೋದಾಮು ತೆರವಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಡುಬಿದ್ರಿ ಗ್ರಾಮ ಶಾಖೆ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿ ಗ್ರಾಪಂಗೆ ಮನವಿ ಪತ್ರ ಸಲ್ಲಿಸಿದರು.
ಜನವಸತಿ ಪ್ರದೇಶವಾಗಿರುವ ಪಾದೆಬೆಟ್ಟಿನಲ್ಲಿರುವ ಗ್ಯಾಸ್ ಗೋದಾಮು ತೆರವಿಗೆ ಒತ್ತಾಯಿಸಿ 10 ವರ್ಷಗಳಿಂದ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಮನವಿ ನೀಡಿ ಹೋರಾಟ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಗ್ರಾಪಂ ಗೋದಾಮು ತೆರವಿಗೆ ಎರಡು ಬಾರಿ ನೋಟಿಸ್ ನೀಡಿದರೂ ತಾಲೂಕು ಪಂಚಾಯಿತಿ ಯಾವುದೇ ಪರಿಶೀಲನೆ ನಡೆಸದೆ ಗ್ರಾಪಂ ನೋಟಿಸ್‌ಗೆ ಏಕಾಏಕಿ ತಡೆಯಾಜ್ಞೆ ನೀಡಿ, ಎಸ್‌ಒ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ವೇಳೆ ಗೋದಾಮು ಮಾಲೀಕರು ಹಣದ ಪ್ರಭಾವದಿಂದ ಇಂಧನ ಇಲಾಖೆಯಿಂದ ಪರವಾನಗಿ ನವೀಕರಿಸುತ್ತಾ ಬಂದಿದ್ದಾರೆ.
2021 ಸೆ.30ಕ್ಕೆ ಪರವಾನಗಿ ಮುಗಿದಿದ್ದು, 10 ತಿಂಗಳಿನಿಂದ ಪರವಾನಗಿ ರಹಿತವಾಗಿ ಕಾರ್ಯಾಚರಿಸುತ್ತಿದೆ.ಈ ಗೋದಾಮಿನಿಂದಾಗಿ ಸ್ಥಳೀಯರ ನೆಮ್ಮದಿ ಹಾಳಾಗಿದೆ. ಜನ ನೆಮ್ಮದಿಯಿಂದ ಬದುಕುವಂತಾಗಲೂ ಗೋದಾಮಿನಲ್ಲಿ ಯಾವುದೇ ಅಪಾಯಕಾರಿ ಸ್ಫೋಟಕ ಹಾಗೂ ಗ್ಯಾಸ್ ದಾಸ್ತಾನಿಗೆ ಅವಕಾಶ ನೀಡದಂತೆ ಪ್ರತಿಭಟನಕಾರರು ಆಗ್ರಹಿಸಿದರು.
ಸಂಘಟನೆ ಜಿಲ್ಲಾ ಸಂಚಾಲಕ ಸುಂದರ ಮಾಸ್ತರ್, ಪ್ರಮುಖರಾದ ಪರಮೇಶ್ವರ ಉಪ್ಪೂರು, ವಿಠಲ ಉಚ್ಚಿಲ, ಶ್ರೀಧರ್ ಉಡುಪಿ, ಪಡುಬಿದ್ರಿ ಶಾಖೆ ಸಂಚಾಲಕ ಸುರೇಶ್, ವಿಠಲ, ವಸಂತಿ, ರಮೇಶ್ ನಂಬಿಯಾರ್ ಮತ್ತಿತರರು ಉಪಸ್ಥಿತರಿದ್ದರು.