ಜಿಲ್ಲೆ

ಗ್ಯಾಸ್ ಸಿಲಿಂಡರ್ ಸ್ಪೋಟ್, 7 ಜನ ಗಂಭೀರ ಗಾಯ

ಜಗದೀಶ ಹೊಂಬಳಿ

ಬೆಳಗಾವಿ: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದರಿಂದ 9 ತಿಂಗಳ ಮಗು ಸೇರಿ 7 ಜನರು ಗಂಭೀರವಾಗಿ ಗಾಯಗೊಂಡ ಘಟನೆ  ಗೋಕಾ ತಾಲೂಕಿನ ಅಕ್ಕತಂಗೇರಹಾಳದಲ್ಲಿ ಶನಿವಾರ ರಾತ್ರಿ ನಡೆದಿದೆ.
 9 ತಿಂಗಳು ಮಗು ಬಸನಗೌಡ ನಿರ್ವಾಣಿ, ರಾಜಶ್ರೀ ನಿರ್ವಾಣಿ (42), ಅಶೋಕ ನಿರ್ವಾಣಿ (45), ಸೋಮನಗೌಡ (44), ದೀಪಾ (42), ನವೀನ (14), ವಿದ್ಯಾ (13) ಗಾಯಗೊಂಡವರು. ಮೂವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಸದಸ್ಯರೆಲ್ಲ ರಾತ್ರಿ ಊಟ ಮಾಡಿ ಮಲಗಿದ್ದರು. ಈ ವೇಳೆ ಅಡುಗೆ ಅನಿಲ ಸಿಲಿಂಡರಿನಿಂದ ಅನಿಲ ಸೋರಿಕೆಯಾಯಿತು. ವಾಸನೆಯಿಂದ ಎಚ್ಚರವಾದ ಮನೆಯ ಸದಸ್ಯರೊಬ್ಬರು ಮೊಬೈಲ್ ಟಾರ್ಚ್ ಆನ್ ಮಾಡಿ ಸಿಲಿಂಡರ್ ಬಂದ್ ಮಾಡಲು ಬಂದರು. ಈ ವೇಳೆ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟವಾಯಿತು. ಸ್ಫೋಟದ ರಭಸಕ್ಕೆ ಮನೆಯ ಹೆಂಚುಗಳು ಹಾರಿಹೋದವು. ಮನೆಬಳಕೆ ವಸ್ತುಗಳು ಚೆಲ್ಲಾಪಿಲ್ಲಿಯಾದವು. ನೋಡನೋಡುತ್ತಿದ್ದಂತೆಯೇ ಮನೆ ಹೊತ್ತಿ ಉರಿಯಿತು ಎಂದು ಗಾಯಗೊಂಡವರು ತಿಳಿಸಿದ್ದಾರೆ.
 ಅಂಕಲಗಿ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ತಡವಾಗಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಪಕ್ಕದ ಮನೆಗೆ ವ್ಯಾಪಿಸದಂತೆ ತಡೆದರು.