ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಪವಿತ್ರೋತ್ಸವ ಶಾತ್ತುಮೊರೈ ಪ್ರಯುಕ್ತ ಭಾನುವಾರ ಗರುಡ ವಾಹನೋತ್ಸವ ಜರುಗಿತು. 
ಜಿಲ್ಲೆ

ಚೆಲುವನಾರಾಯಣಸ್ವಾಮಿಗೆ ಗರುಡಸೇವೆ

ರವಿಕುಮಾರ್ ಪಿ. ಕೆ

ಮೇಲುಕೋಟೆ: ಚೆಲುವನಾರಾಯಣಸ್ವಾಮಿಗೆ ಪವಿತ್ರೋತ್ಸವ ಸಮಾರೋಪದ ಅಂಗವಾಗಿ ಭಾನುವಾರ ಗರುಡಸೇವೆ ವೈಭವದಿಂದ ಜರುಗಿತು. ಸಹಸ್ರಾರು ಭಕ್ತರು ಗರುಡರೂಢನಾದ ಚೆಲುವನ ದರ್ಶನ ಪಡೆದು ಪುನೀತರಾದರು.

ವಾರ್ಷಿಕವಾಗಿ ನಡೆದ ಉತ್ಸವ, ಮಹೋತ್ಸವಗಳ ವೇಳೆ ಆಗಿರಬಹುದಾದ ಲೋಪದೋಷಗಳ ಪರಿಹಾರಕ್ಕಾಗಿ ಮೇಲುಕೋಟೆ ದೇವಾಲಯಗಳಲ್ಲಿ ಕಳೆದ ಸೋಮವಾರದಿಂದ ಆರಂಭವಾಗಿ ಏಳು ದಿನಗಳ ಕಾಲ ಜರುಗಿದ ಪವಿತ್ರೋತ್ಸವ ಭಾನುವಾರ ಶಾತ್ತಮೊರೈಯೊಂದಿಗೆ ಮುಕ್ತಾಯವಾಯಿತು.

ದೇವಾಲಯದಲ್ಲಿ ದೇವಾನುದೇವತೆಗಳನ್ನು ಆಹ್ವಾನಿಸಿ ಮಂಡಲಸ್ಥಾಪಿಸಿ ವಿಧಿವತ್ತಾಗಿ ಪವಿತ್ರೋತ್ಸವವನ್ನು ಆಚರಿಸಲಾಯಿತು. ಅಮೂಲ್ಯ ರೇಷ್ಮೆಯಿಂದ ತಯಾರಿಸಿದ ಪವಿತ್ರಮಾಲೆಗಳಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಲಾಗಿತ್ತು. ಪವಿತ್ರೋತ್ಸವ ಮುಕ್ತಾಯದಂದು ಇಲ್ಲಿನ ವಿಶಿಷ್ಟ ಪ್ರಸಾದವಾದ ಕದಂಬ, ಸಕ್ಕರೆ ಪೊಂಗಲ್ ಸಮೇತ ಪವಿತ್ರಮಾಲೆಯ ಪ್ರಸಾದವನ್ನೂ ಭಕ್ತರಿಗೆ ವಿತರಿಸಲಾಯಿತು. ಒಂದು ವಾರದಿಂದ ಚೆಲುವನಾರಾಯಣನಿಗೆ ಶೇಷ, ಹನುಮಂತ, ಗಜವಾಹನ, ಚಂದ್ರಮಂಡಲ, ಕುದುರೆ ಹಾಗೂ ಅಂತಿಮವಾಗಿ ಗರುಡ ವಾಹನೋತ್ಸವ ಜರುಗಿತು.