ಹಾವೇರಿ: ತರಕಾರಿ ಹರಾಜು ಮಾರುಕಟ್ಟೆಯಲ್ಲಿ ತರಕಾರಿ, ಇತರ ಪದಾರ್ಥಗಳನ್ನು ಕಳವು ಮಾಡಿದ್ದ ಖದೀಮನೊಬ್ಬನಿಗೆ ರೈತರ ಗೂಸಾ ಕೊಟ್ಟ ಘಟನೆ ಸೋಮವಾರ ನಡೆದಿದೆ.
ಹರಾಜಿಗೆ ಬೆಳ್ಳುಳ್ಳಿ ಚೀಲಗಳನ್ನು ಇಳಿಸುವಾಗ ರೈತರು ವಾಹನದಲ್ಲಿದ್ದ ಚೀಲವೊಂದು ಕಾಣೆಯಾಗಿದ್ದರಿಂದ ಅಕ್ಕಪಕ್ಕ ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ರೈತರು ಬಾಡಿಗೆಗೆ ಬಂದಿದ್ದ ವಾಹನದ ಚಾಲಕನಿಗೆ, ನೀನೇ ಅದರ ಹಣ ಕೊಡಬೇಕು ಎಂದು ತಾಕೀತು ಮಾಡಿದರು.
ಇದರಿಂದ ಕಂಗಾಲಾದ ವಾಹನದ ಚಾಲಕ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಚೀಲದ ಹುಡುಕಾಟ ಆರಂಭಿಸಿದ್ದಾನೆ. ಆಗ ಬೊಲೆರೊ ವಾಹನವೊಂದರಲ್ಲಿ ತಾನು ತಂದಿದ್ದ ರೈತರ ಬೆಳ್ಳುಳ್ಳಿ ಚೀಲ ಇರುವುದನ್ನು ಪತ್ತೆ ಮಾಡಿ ರೈತರನ್ನು ಕರೆದಿದ್ದಾನೆ. ಆಗ ಸ್ಥಳದಲ್ಲಿದ್ದ ಐವರು ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಓರ್ವ ಮಾತ್ರ ಚಾಲಕನ ಕೈಗೆ ಸಿಕ್ಕಿಬಿದ್ದ. ರೈತರು ಆತನಿಗೆ ಧರ್ಮದೇಟು ನೀಡಿ ಎಪಿಎಂಸಿ ಅಧಿಕಾರಿಗಳ ಮೂಲಕ ಪೊಲೀಸ್ ಠಾಣೆಗೆ ಒಪ್ಪಿಸಿದರು.
ಐದಾರು ತಿಂಗಳಿನಿಂದ ಕೃತ್ಯ: ನಗರದ ಹರಾಜು ಮಾರುಕಟ್ಟೆಗೆ ರೈತರು ವಾಹನಗಳಲ್ಲಿ ಬೆಳಗ್ಗೆಯ ಹರಾಜಿಗೆಂದು ತರಕಾರಿ ತರುತ್ತಿದ್ದರು. ಇನ್ನೂ ಕೆಲವರು ಬೆಳಗ್ಗೆ ವಾಹನ ದಟ್ಟಣೆಯಾಗುತ್ತದೆ ಎಂದು ರಾತ್ರಿಯೇ ತರಕಾರಿ ವಾಹನಗಳೊಂದಿಗೆ ಮಾರುಕಟ್ಟೆಗೆ ಬಂದು ಠಿಕಾಣಿ ಹೂಡುತ್ತಿದ್ದರು. ಈ ಸಮಯದಲ್ಲಿ ಐದಾರು ಜನರಿರುವ ಖದೀಮರ ತಂಡ ರೈತರ ತರಕಾರಿಗಳಲ್ಲಿ ಒಂದೆರೆಡು ಟ್ರೇನಂತೆ ಕದ್ದು ತಮ್ಮ ವಾಹನದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಬೆಳಗ್ಗೆ ಮತ್ತೆ ಹರಾಜಿನಲ್ಲಿ ಭಾಗವಹಿಸಿ ಕೆಲವೊಂದು ಟ್ರೇ ತರಕಾರಿ ಖರೀದಿಸಿಕೊಂಡು ರಸೀದಿ ಪಡೆದು ಎಪಿಎಂಸಿಯಿಂದ ರಾಜಾರೋಷವಾಗಿ ಪರಾರಿಯಾಗುತ್ತಿದ್ದರು.
ಕಳೆದ ಐದಾರು ತಿಂಗಳಿನಿಂದ ತರಕಾರಿ ಟ್ರೇ, ಚೀಲಗಳು ನಾಪತ್ತೆಯಾಗುತ್ತಿರುವ ಕುರಿತು ಹಲವು ರೈತರು ವ್ಯಾಪಾರಸ್ಥರ ಗಮನಕ್ಕೂ ತಂದಿದ್ದರು. ಅಲ್ಲದೆ, ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ತಮ್ಮ ತರಕಾರಿ ಟ್ರೇ, ಚೀಲಗಳು ಕಳುವಾದರೂ ಕೆಲ ರೈತರು, ಮಾರ್ಗಮಧ್ಯೆಯೇ ರಸ್ತೆಯಲ್ಲಿ ವಾಹನದಿಂದ ಬಿದ್ದಿರಬೇಕು ಎಂದು ಸುಮ್ಮನಾಗುತ್ತಿದ್ದರು. ಕೆಲವೊಮ್ಮೆ ರೈತರು ಕಳವಾದ ಮಾಲಿನ ಹಣವನ್ನು ಚಾಲಕನಿಂದ ವಸೂಲಿ ಮಾಡಿ ಸುಮ್ಮನಾಗುತ್ತಿದ್ದರು.
ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದರು: ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಪ್ರತಿ ಕ್ವಿಂಟಾಲ್ಗೆ 10ರಿಂದ 12 ಸಾವಿರ ರೂ. ದರವಿದೆ. ಕಳೆದೊಂದು ವಾರದಿಂದ ಈ ಖದೀಮರು ಬೆಳ್ಳುಳ್ಳಿ ಕದಿಯಲು ಮುಂದಾಗಿದ್ದರು. ಹೀಗಾಗಿ ರೈತರು ಹಾಗೂ ಬಾಡಿಗೆ ವಾಹನದವರು ಮಾಲು ಇಲ್ಲವಾಗುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ್ದರು. ಅದರಂತೆ ಸೋಮವಾರ ಬೆಳ್ಳುಳ್ಳಿ ಚೀಲ ನಾಪತ್ತೆಯಾಗಿದ್ದನ್ನು ರೈತರು, ವಾಹನ ಚಾಲಕರು ಗಂಭೀರವಾಗಿ ಪರಿಗಣಿಸಿ, ಚೀಲಕ್ಕಾಗಿ ಹುಡುಕಾಟ ನಡೆಸಿದಾಗ ಖದೀಮರ ಕೃತ್ಯ ಬೆಳಕಿಗೆ ಬಂದಿದೆ.
ಹಾವೇರಿ ತರಕಾರಿ ಹರಾಜು ಮಾರುಕಟ್ಟೆಯಲ್ಲಿ ತರಕಾರಿ ಕಳ್ಳತನದ ಕುರಿತು ಅನೇಕ ರೈತರು ದೂರಿದ್ದರು. ನಾವು ಸೆಕ್ಯುರಿಟಿಯನ್ನು ಬಿಗಿಗೊಳಿಸಿದ್ದೆವು. ಎಲ್ಲ ಗೇಟ್ಗಳಲ್ಲಿಯೂ ಬ್ಯಾರಿಕೇಡ್ ಹಾಕಿದ್ದೆವು. ಸೋಮವಾರ ಬೆಳ್ಳುಳ್ಳಿ ಚೀಲವನ್ನು ಕದ್ದಿದ್ದು ಪತ್ತೆಯಾಗಿದೆ. ಹಾನಗಲ್ಲ ತಾಲೂಕಿನ ಓರ್ವ ವ್ಯಕ್ತಿಯನ್ನು ರೈತರು ಹಿಡಿದಿದ್ದರು. ಆ ವ್ಯಕ್ತಿ ಹಾಗೂ ವಾಹನವನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದೇವೆ.| ಮಲ್ಲಿಕಾರ್ಜುನ ಹಾವೇರಿ ಅಧ್ಯಕ್ಷ, ಎಪಿಎಂಸಿ ಹಾವೇರಿ