ಮಡಿಕೇರಿ:
ಸುಮಾರು ೮ ಸಾವಿರ ಜನಸಂಖ್ಯೆಯ ಗ್ರಾಮ ಪಂಚಾಯಿತಿಯೊಂದು ಶೂನ್ಯ ತ್ಯಾಜ್ಯ ಸಂಗ್ರಹದ ಸಾಧನೆ ಮಾಡುತ್ತಿದೆ ಎಂದರೆ ನಂಬಲೇಬೇಕು. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಉಳಿಯುವುದೇ ಇಲ್ಲ. ಹಾಗಾಗಿ ತ್ಯಾಜ್ಯ ಎಲ್ಲಿ ಸುರಿಯುವುದು ಎನ್ನುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ತ್ಯಾಜ್ಯ ಸುರಿಯಲು ಬಳಕೆ ಆಗುತ್ತಿದ್ದ ಜಾಗವನ್ನು ಪಾರ್ಕ್ ಮಾಡಲಾಗುತ್ತಿದೆ. ಇಂತಹ ಅಪರೂಪದ ಗುರಿ ಸಾಧಿಸಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಗಾಂಧಿ ಗ್ರಾಮ ಪುರಸ್ಕಾರದ ಗೌರವಕ್ಕೆ ಪಾತ್ರವಾಗುತ್ತಾ ಬಂದಿದೆ.
ನಾಗರಿಕತೆ ಬೆಳೆದಂತೆ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬೆಟ್ಟದಂತೆ ಬೆಳೆಯುತ್ತಲೇ ಹೋಗುವ ಕಸದ ರಾಶಿ ತಂದಿಡುವ ತೊಂದರೆಗಳು ಒಂದೆರಡಲ್ಲ. ಚಿಕ್ಕ ಹಳ್ಳಿಗಳಿಂದ ದೊಡ್ಡ ನಗರಗಳ ತನಕ ತ್ಯಾಜ್ಯ ನಿರ್ವಹಣೆ ಮಾಡುವುದೇ ಸ್ಥಳೀಯ ಆಡಳಿತಗಳಿಗೆ ಇನ್ನಿಲ್ಲದ ತಲೆನೋವು ತರುವ ವಿಷಯವಾಗಿದೆ. ಹಸಿಕಸ, ಒಣಕಸ, ವೈದ್ಯಕೀಯ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಹೀಗೆ ಹಲವು ರೀತಿಯ ತ್ಯಾಜ್ಯಗಳು ನವ ನಾಗರಿಕತೆಯ ಕೊಡುಗೆಗಳಾಗಿ ಕಾಡುತ್ತಿದೆ.
೨೦೧೧ರ ಜನಗಣತಿ ಪ್ರಕಾರ ಸುಮಾರು ೩೩,೪೦೦ರಷ್ಟು ಜನಸಂಖ್ಯೆ ಇರುವ ಮಡಿಕೇರಿಯಲ್ಲಿ ಸಮರ್ಪಕ ಕಸ ವಿಲೇವಾರಿಗೆ ನಗರಸಭೆ ಏದುಸಿರು ಬಿಡುತ್ತಿದೆ. ಸ್ವಲ್ಪ ಆಸಕ್ತಿ ತೋರಿಸಿ, ವೈಜ್ಞಾನಿಕ ಮಾರ್ಗದಲ್ಲಿ ಹೆಜ್ಜೆ ಇಡುವ ಮನಸ್ಸು ಮಾಡಿದರೆ ಈ ಚಿಕ್ಕ ನಗರಕ್ಕೆ ಸಮಸ್ಯೆಯೇ ಅಲ್ಲದ ವಿಷಯವೊಂದು ಕಡ್ಡಿಯನ್ನು ಗುಡ್ಡ ಮಾಡಿಕೊಂಡು ಕುಳಿತಂತೆ ಆಗಿದೆ. ಸ್ಟೋನ್ ಹಿಲ್ ಬೆಟ್ಟದ ಮೇಲೆ ಕಸದ ಮತ್ತೊಂದು ಬೆಟ್ಟವೇ ಬೆಳೆಯುತ್ತಿದೆ. ಕಸ ವಿಲೇವಾರಿಯಲ್ಲಿ ಶೂನ್ಯ ಸಂಗ್ರಹ ಮೂಲಕ ಈಗಾಗಲೇ ಸಾಧನೆ ಮಾಡಿರುವ ಪೊನ್ನಂಪೇಟೆ ಪಂಚಾಯಿತಿ ಮಡಿಕೇರಿಯಂತಹ ಎಷ್ಟೋ ನಗರಗಳಿಗೆ ಸ್ಫೂರ್ತಿ ಆಗಬಹುದು.
ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು ೬೦ ಕಿ.ಮೀ, ದೂರದಲ್ಲಿದೆ. ಹಿಂದೆ ವಿರಾಜಪೇಟೆ ತಾಲೂಕಿನ ಭಾಗವಾಗಿದ್ದ ಪೊನ್ನಂಪೇಟೆ ಈಗ ತಾಲೂಕು ಕೇಂದ್ರ. ೨೨೫.೮೦ ಹೆಕ್ಟೇರ್ ಭೂ ಪ್ರದೇಶ ಹೊಂದಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮರು ೮ ಸಾವಿರದಷ್ಟು ಜನಸಂಖ್ಯೆ ಇದೆ. ೧೬೨೦ ಕುಟುಂಬಗಳು ವಾಸ ಮಾಡುತ್ತಿದೆ. ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರುವತೋಕ್ಲು, ಹಳ್ಳಿಗಟ್ಟು, ಮತ್ತೂರು, ಮುಗುಟಗೇರಿ, ಹುದೂರು ಗ್ರಾಮಗಳಿದೆ. ಇಷ್ಟಾದರೂ ಇಲ್ಲಿ ದಿನದಂತ್ಯಕ್ಕೆ ಸ್ವಲ್ಪವೂ ತ್ಯಾಜ್ಯ ಉಳಿಯುವುದಿಲ್ಲ.
ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಕಸದಿಂದ ರಸ ಎನ್ನುವುದೇ ಮೂಲ ಮಂತ್ರ. ದಿನಂಪ್ರತಿ ಸಂಗ್ರಹ ಆಗುವ ತ್ಯಾಜ್ಯವನ್ನು ಪ್ರಮುಖವಾಗಿ ಹಸಿ ಮತ್ತು ಒಣಕಸವನ್ನಾಗಿ ವಿಂಗಡಿಸಲಾಗುತ್ತದೆ. ಹಸಿಕಸದ ಬಹುತೇಕ ಭಾಗ ಹಂದಿ, ಹಸುವಿನಂತಹ ಪ್ರಾಣಿಗಳ ಆಹಾರಕ್ಕೆ ಬಳಕೆ ಆಗುತ್ತದೆ. ಪ್ರಾಣಿಗಳು ತಿನ್ನದಿರುವ ಹಸಿಕಸದ ಭಾಗಗಳು ಸಾವಯ ಗೊಬ್ಬರ ತಯಾರಿಸಲು ಉಪಯೋಗಿಸಲಾಗುತ್ತದೆ. ಮತ್ತೊಂದು ಕಡೆ ಒಣಕಸವನ್ನು ಪುನರ್‌ಬಳಕೆಗೆ ಲಭ್ಯವಾಗುವ, ಬೇರೆ ರೂಪದಲ್ಲಿ ಬಳಸಲು ಸಾಧ್ಯವಿರುವ, ಗುಜರಿಗೆ ಹಾಕಲು ಸಾಧ್ಯವಿರುವ.. ಹೀಗೆ ಮತ್ತೆ ವಿಂಗಡಣೆ ಮಾಡಿ ವಿಲೇವಾರಿ ಮಾಡಲಾಗುತ್ತದೆ. ಹಾಗಾಗಿಯೇ ಕೊನೆಯಲ್ಲಿ ಯಾವ ತ್ಯಾಜ್ಯವೂ ಉಳಿಯುವದಿಲ್ಲ.
ಜಿಲ್ಲೆಯ ಹಲವೆಡೆಯೂ ಈಗ ಗ್ರಾಮ ಪಂಚಾಯಿತಿಗಳಲ್ಲಿ ಪೊನ್ನಂಪೇಟೆ ಮಾದರಿ ಅನುಸರಿಸಲಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ವಾಹನಗಳನ್ನು ಒದಗಿಸಿರುವುದರಿಂದ ತ್ಯಾಜ್ಯ ಸಂಗ್ರಹದ ಕೆಲಸ ಈಗ ಸುಲಭವಾಗಿದೆ. ಮೊದಲೆಲ್ಲಾ ಮನೆಯಲ್ಲಿ ಉತ್ಪತ್ತಿಯಾಗುವ ಎಲ್ಲಾ ಕಸ ಒಟ್ಟಿಗೆ ತಂದು ವಾಹನಕ್ಕೆ ಸುರಿಯಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗತಿ ಮೂಡುತ್ತಿದೆ.
ಕೊಡಗಿನಲ್ಲಿ ಮನೆ ಮನೆಯಲ್ಲೂ ಕಸ ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳ ಮೂಲಕ ಎರಡೆರಡು ಕಸದ ಬುಟ್ಟಿಗಳನ್ನು ನೀಡಲಾಗಿದೆ. ಒಂದರಲ್ಲಿ ಒಣಕಸ, ಮತ್ತೊಂದರಲ್ಲಿ ಹಸಿ ಕಸ ಹಾಕಿಡುವಂತೆ ಸೂಚಿಸಲಾಗಿದ್ದು, ಕಸ ಸಂಗ್ರಹಿಸುವ ವಾಹನಗಳಿಗೆ ಮನೆಗಳಿಂದ ತ್ಯಾಜ್ಯ ಕೊಡುವಾಗಲೇ ವಿಂಗಡಿಸಿರುವ ಕಸವನ್ನು ಮಾತ್ರ ಕೊಡುವಂತೆ ಸೂಚಿಸಲಾಗಿದೆ. ಸಂಗ್ರಹವಾಗುವ ತ್ಯಾಜ್ಯವನ್ನು ಈ ಹಿಂದೆ ಪಂಚಾಯಿತಿಗಳು ಊರ ಹೊರವಲಯದಲ್ಲಿ ರಾಶಿ ಹಾಕಿ ಸುಟ್ಟು ಹಾಕುವುದು ಸಾಮಾನ್ಯವಾಗಿತ್ತು. ಆದರೆ ಈಗ ಕಸ ವಿಲೇವಾರಿ ಘಟಕ ಸ್ಥಾಪನೆ ಕಡ್ಡಾಯವಾಗಿದೆ.
ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಕಸದಿಂದಲೂ ಕಾಸು ಮಾಡುತ್ತಿದೆ. ಒಣಕಸ ಮಾರಾಟ ಮಾಡುವುದರಿಂದ ಒಂದಿಷ್ಟು ಹಣ ಸಿಗುತ್ತಿದೆ. ಹೀಗೆ ಸಿಗುವ ಮೊತ್ತವನ್ನು ಪೌರ ಕಾರ್ಮಿಕರ ಕಲ್ಯಾಣ ನಿಧಿಗೆ ಬಳಸಲಾಗುತ್ತಿದೆ. ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ, ಅವರಿಗೆ ಕೆಲಸ ನಿರ್ವಹಿಸಲು ಅಗತ್ಯವಿರುವ ಕೈ ಗವಸು, ಗಂಬೂಟ್ ಸೇರಿದಂತೆ ಇತರ ವಸ್ತುಗಳ ಖರೀದಿಗೂ ಬಳಕೆ ಆಗುತ್ತಿದೆ. ತ್ಯಾಜ್ಯಗಳನ್ನು ವಿಂಗಡಿಸಿ ಮಾರಾಟ ಮಾಡುವುದರಿಂದ ಒಂದು ದೊಡ್ಡ ಪಂಚಾಯಿತಿ ತಿಂಗಳಿಗೆ ಸರಾಸರಿ ೧೦-೧೨ ಸಾವಿರ ರೂಪಾಯಿ ತನಕ ಹಣ ಸಂಪಾದನೆ ಆಗುತ್ತದೆ. ಪಂಚಾಯಿತಿಗಳಲ್ಲಿ ನಡೆಯುವ ವ್ಯವಹಾರಗಳಿಗೆ ಹೋಲಿಸಿದರೆ ಇದು ಸಣ್ಣ ಮೊತ್ತವಾಗಿ ಕಂಡರೂ ಸುಟ್ಟು ಕರಕಲಾಗಿಯೋ, ಮಣ್ಣಿನೊಳಗೆ ಸೇರಿಯೋ ಹಾಳಾಗುತ್ತಿದ್ದ ಕಸದಲ್ಲೂ ಹಣ ಹುಡುಕಿರುವುದು ಮಾದರಿ ಕಾರ್ಯವೇ ಹೌದು ಎನ್ನುವುದು ಪರಿಸರ ಪ್ರಿಯರ ಮಾತು.
ಪೊನ್ನಂಪೇಟೆಯಲ್ಲಿ ಕಸ ಉಳಿಯುತ್ತಿಲ್ಲ. ಹಾಗಾಗಿ ಕಸ ಸುರಿಯಲು ಸುಮಾರು ೪೦ ವರ್ಷಗಳಿಂದ ಬಳಕೆಯಾಗುತ್ತಿದ್ದ ೪೦ ಸೆಂಟ್ ಜಾಗವನ್ನು ಸುಂದರ ಪಾರ್ಕ್ ಆಗಿ ಆಡಳಿತ ಮಂಡಳಿ ರೂಪಿಸುತ್ತಿದೆ. ಹಿಂದೊಮ್ಮೆ ಕಸದ ರಾಶಿ, ಗಬ್ಬು ವಾಸನೆ, ಮೂಗು ಮುಚ್ಚಿಕೊಂಡು ತಿರುಗಾಡಬೇಕಿದ್ದ ಸ್ಥಳ ಹೂವಿನ ಘಮ ಘಮ ಪರಿಮಳಕ್ಕೆ ಸಾಕ್ಷಿ ಆಗುತ್ತಿದೆ. ಜಿಲ್ಲಾ ಪಂಚಾಯಿತಿಯಿಂದ ೧೫ ಲಕ್ಷ ರೂ.ನಿಧಿ ಬಳಸಿಕೊಂಡು ಸುಸಜ್ಜಿತ ಉದ್ಯಾನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ವಿಶಿಷ್ಟ ರೀತಿಯಲ್ಲಿ ಪಾರ್ಕ್ ನಿರ್ಮಾಣ ಆಗುತ್ತಿದ್ದು, ದಾನಿಗಳ ಸಹಕಾರ ಪಡೆದುಕೊಳ್ಳಲೂ ನಿರ್ಧರಿಸಲಾಗಿದೆ.
ಕಸದ ಸಮರ್ಪಕ ವಿಲೇವಾರಿಯಿಂದಾಗಿ ನಾವು ಶೂನ್ಯ ಕಸ ಸಾಧಿಸಿದ್ದೇವೆ. ತ್ಯಾಜ್ಯದ ಮರು ಬಳಕೆಗೆ ಆದ್ಯತೆ ಕೊಡಲಾಗಿದೆ. ಹಾಗಾಗಿಯೇ ನಮ್ಮಲ್ಲಿ ಸ್ವಲ್ಪವೂ ಕಸ ಉಳಿಯುವುದಿಲ್ಲ. ಮರು ಬಳಕೆಯ ತ್ಯಾಜ್ಯವನ್ನು ಮಾರಾಟ ಮಾಡಲಾಗುತ್ತದೆ. ಇದರಿಂದಲೇ ನಮಗೆ ಸುಮಾರು ೭೦, ೮೦ ಸಾವಿರ ಆದಾಯ ಬಂದಿದೆ. ಕಸ ಹಾಕಲು ಬಳಕೆ ಆಗುತ್ತಿದ್ದ ಜಾಗವನ್ನು ಪಾರ್ಕ್ ಮಾಡಲಾಗುತ್ತಿದೆ. ೨೦೨೦, ೨೦೨೧, ೨೦೨೨ರಲ್ಲಿ ನಮಗೆ ಗಾಂಧಿ ಗ್ರಾಮ ಪುರಸ್ಕಾರವೂ ಬಂದಿದೆ.
ಆರ್.ಜೆ. ಪುಟ್ಟರಾಜು, ಪಿಡಿಒ ಪೊನ್ನಂಪೇಟೆ