ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಹಸಿತ್ಯಾಜ್ಯ ವಿಲೇವಾರಿಗೆ ನಿರ್ಮಿಸಲಾಗಿರುವ ಕಾಂಪೋಸ್ಟ್ ಗೊಬ್ಬರ ಗುಂಡಿಯಲ್ಲಿ ತುಂಬಿರುವ ಗೊಬ್ಬರ. 
ಜಿಲ್ಲೆ

ಗಂಗೊಳ್ಳಿಯಲ್ಲಿ ಬಿಗಡಾಯಿಸುತ್ತಿದೆ ತ್ಯಾಜ್ಯ ಸಮಸ್ಯೆ

Prashanth S Suvarna

ಗಂಗೊಳ್ಳಿ: ಗಂಗೊಳ್ಳಿ ಗ್ರಾಪಂನಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಸ್ಕರಣಾ ಘಟಕ ಕಾರ್ಯಾಚರಿಸುತ್ತಿದ್ದರೂ, ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಘಟಕದ ವಿಸ್ತರಣೆಗೆ ಸೂಕ್ತ ಜಾಗದ ಕೊರತೆ ಎದುರಾಗಿದ್ದು, ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ.

ಗಂಗೊಳ್ಳಿ ಗ್ರಾಪಂ ಆಡಳಿತ ಇಲ್ಲಿನ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆ ಕಳೆದ ಸುಮಾರು ಒಂದುವರೆ ವರ್ಷಗಳ ಹಿಂದೆ ಖಾಸಗಿ ಎನ್‌ಜಿಒ ಸಂಸ್ಥೆ ಟಿಪ್ಸ್‌ಗೆ ವಹಿಸಿಕೊಟ್ಟಿತ್ತು. ಇದೀಗ ಘನ ಮತ್ತು ದ್ರವ ಸಂಪನ್ಮೂಲ ಘಟಕ ನಿರ್ವಹಣೆ ಮತ್ತು ತ್ಯಾಜ್ಯ ಸಂಗ್ರಹಣೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸುಮಾರು 1300ಕ್ಕೂ ಅಧಿಕ ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಆದರೆ ಗಂಗೊಳ್ಳಿಯ ಎಲ್ಲ ಭಾಗಗಳಲ್ಲಿ ತ್ಯಾಜ್ಯ ಸಂಗ್ರಹಣೆ ನಡೆಯದಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ವಿಲೇ ಸಮಸ್ಯೆ ಮುಂದುವರಿದಿದೆ. ಇನ್ನೊಂದೆಡೆ ಘಟಕದಲ್ಲಿ ಸಾಕಷ್ಟು ಸ್ಥಳ ಇಲ್ಲದಿರುವುದರಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 4600ಕ್ಕೂ ಮಿಕ್ಕಿ ಮನೆ ಮತ್ತು ವಾಣಿಜ್ಯ ಮಳಿಗೆಗಳಿವೆ. ಈ ಪೈಕಿ 300ಕ್ಕೂ ಅಧಿಕ ಅಂಗಡಿಗಳು, ಸುಮಾರು 15 ಹೋಟೆಲ್‌ಗಳು, 10ಕ್ಕೂ ಮಿಕ್ಕಿ ಮಾಂಸದ ಅಂಗಡಿಗಳು ಸೇರಿವೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರು ಸಮೀಪ ಸುಮಾರು 7.5 ಲಕ್ಷ ರೂ.ವೆಚ್ಚದಲ್ಲಿ ಎಸ್‌ಎಲ್‌ಆರ್‌ಎಂ ಘಟಕ ನಿರ್ಮಿಸಲಾಗಿತ್ತು. ಘಟಕದಲ್ಲಿ ಹಸಿಕಸ ವಿಲೇವಾರಿಗೆ ಕಾಂಪೋಸ್ಟ್ ಗೊಬ್ಬರದ ಗುಂಡಿ ನಿರ್ಮಾಣ ಸಹಿತ ಎಲ್ಲ ರೀತಿಯ ಸೌಕರ್ಯಗಳನ್ನು ಸ್ಥಳೀಯಾಡಳಿತ ಮಾಡಿದೆ. ಕಾಂಪೋಸ್ಟ್ ಗುಂಡಿಯಲ್ಲಿ ಗೊಬ್ಬರ ತುಂಬಿದ್ದರೂ ಅದನ್ನು ತೆಗೆಯುವ ಕೆಲಸ ನಡೆದಿಲ್ಲ. ಹೀಗಾಗಿ ಹಸಿ ಕಸ ನಿರ್ವಹಣೆ ಮಾಡಲು ಅಲ್ಲಿನ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರಾಣಗಳಿಗೆ ಮಾರಕ

ತ್ಯಾಜ್ಯ ಸಂಗ್ರಹಣೆ ಸಂದರ್ಭ ಜನರು ಹೆಚ್ಚಾಗಿ ಪ್ಯಾಂಪರ್ಸ್‌ ತ್ಯಾಜ್ಯ ನೀಡುತ್ತಿದ್ದು ಇದನ್ನು ವಿಲೇವಾರಿ ಮಾಡಲು ಸಾಧ್ಯವಾಗದೆ ಸಮಸ್ಯೆ ಎದುರಿಸುತ್ತಿದೆ. ಘಟಕದ ಎದುರಲ್ಲೇ ವಿಲೇವಾರಿ ಮಾಡಲು ಸಾಧ್ಯವಾಗದ ಪ್ಯಾಂಪರ್ಸ್‌ ಮತ್ತಿತರ ತ್ಯಾಜ್ಯಗಳನ್ನು ರಾಶಿ ಹಾಕಲಾಗಿದೆ. ದನಗಳು ಹಾಗೂ ನಾಯಿಗಳು ತ್ಯಾಜ್ಯದ ರಾಶಿಯಿಂದ ತ್ಯಾಜ್ಯವನ್ನು ತಿನ್ನುತ್ತಿದ್ದು ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.

ಕಾರ್ಯಕರ್ತರ ಕೊರತೆ

ಘನ ಮತ್ತು ದ್ರವ ಸಂಪನ್ಮೂಲ ಘಟಕದಲ್ಲಿ ಕಾರ್ಯನಿರ್ವಹಿಸಲು ಕಾರ್ಯಕರ್ತರ ಕೊರತೆ ಕೂಡ ತ್ಯಾಜ್ಯ ವಿಲೇ ಸಮಸ್ಯೆ ಮತ್ತಷ್ಟು ಹದಗೆಡುವಂತೆ ಮಾಡುತ್ತಿದೆ. ಎಸ್‌ಎಲ್‌ಆರ್‌ಎಂ ಘಟಕದ ಸುತ್ತಲೂ ಬಿದ್ದಿರುವ ತ್ಯಾಜ್ಯಗಳು ಗ್ರಾಮಸ್ಥರ ಕಣ್ಣು ಕುಕ್ಕಿಸುವಂತೆ ಮಾಡುತ್ತಿದ್ದು, ಎಸ್‌ಎಲ್‌ಆರ್‌ಎಂ ಘಟಕದ ಸಮಸ್ಯೆ ಗಂಗೊಳ್ಳಿ ಗ್ರಾಮ ಸಭೆಯಲ್ಲೂ ಪ್ರತಿಧ್ವನಿಸಿತ್ತು.ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಸ್‌ಎಲ್‌ಆರ್‌ಎಂ ಘಟಕ ವಿಸ್ತರಣೆಯಾದರೆ ಮಾತ್ರ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಾಧ್ಯ. ಹೀಗಾಗಿ ಸ್ಥಳೀಯಾಡಳಿತ ಎಸ್‌ಎಲ್‌ಆರ್‌ಎಂ ಘಟಕ ವಿಸ್ತರಣೆ ಮಾಡಲು ಎದುರಾಗಿರುವ ಜಾಗದ ಸಮಸ್ಯೆ ಬಗೆಹರಿಸಬೇಕಿದೆ. ಗಂಗೊಳ್ಳಿ ಗ್ರಾಮವನ್ನು ತ್ಯಾಜ್ಯಮುಕ್ತ ಗ್ರಾಮವನ್ನಾಗಿ ಮಾಡುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ.

ಗಂಗೊಳ್ಳಿ ಗ್ರಾಪಂ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆ ಉತ್ತಮವಾಗಿ ನಡೆಯುತ್ತಿದ್ದು, ಇಡೀ ಗ್ರಾಮದ ತ್ಯಾಜ್ಯ ಸಂಗ್ರಹಣೆಗೆ ಘಟಕ ವಿಸ್ತರಣೆ ಅಗತ್ಯವಾಗಿದೆ. ಹೆಚ್ಚಿನ ಜನರು ಪ್ಯಾಂಪರ್ಸ್‌ ನೀಡುತ್ತಿದ್ದು ಅದನ್ನು ವಿಲೇವಾರಿ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದೆ. ಘಟಕ ವಿಸ್ತರಣೆಗೆ ಜಾಗದ ಸಮಸ್ಯೆ ಕೂಡ ಇದೆ. ಆದಷ್ಟು ಶೀಘ್ರ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು.-ಉಮಾಶಂಕರ ಪಿಡಿಒ, ಗ್ರಾಪಂ ಗಂಗೊಳ್ಳಿ https://www.vijayavani.net/mandarthi-sri-durgaparameshwari-temple-ustav