ಹುಳಿಯಾರು:ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಸಮಸ್ಯೆಯ ಸುಳಿಯಲ್ಲಿ ಪಪಂ ಸಿಲುಕಿದೆ.
ಚಿಕ್ಕನಾಯಕನಹಳ್ಳಿಯ ಪುರಸಭೆ ಸದಸ್ಯರು ಕಸ ಸುರಿಯಲು ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದ್ದು, ಇದರಿಂದ ಉಪವಿಭಾಗಾಧಿಕಾರಿಗಳ ಆದೇಶ ಪಾಲನೆಗೆ ಅಡ್ಡಿಯಾಗಿದೆ. ಈ ಪರಿಸ್ಥಿತಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಮನ್ವಯದ ಕೊರತೆಯನ್ನು ಎತ್ತಿ ತೋರಿಸಿದೆ.
ಕಸ ವಿಲೇವಾರಿಗೆ ಜಾಗವಿಲ್ಲ: ಹುಳಿಯಾರು ಪಟ್ಟಣ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಸುಮಾರು 7 ವರ್ಷಗಳೆ ಕಳೆದಿವೆ. ಇಂದಿಗೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸೂಕ್ತ ಜಾಗ ನಿಗದಿ ಪಡಿಸಿಲ್ಲ. ದಿನಕ್ಕೆ 5-6 ಟನ್‌ನಷ್ಟು ಕಸ ಉತ್ಪಾದನೆಯಾಗುತ್ತಿದ್ದರೂ, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಇದರಿಂದ ಪಟ್ಟಣದಾದ್ಯಂತ ಕಸದ ದುರ್ವಾಸನೆ ಹರಡಿ, ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ತಂದೊಡ್ಡಿದೆ. ಹಿಂದೆ ಮಂಜೂರು ಮಾಡಿದ್ದ ಜಾಗ ಅರಣ್ಯ ಇಲಾಖೆಗೆ ಅಥವಾ ರೈತರಿಗೆ ಸೇರಿದ್ದರಿಂದ ತಕರಾರು ಉಂಟಾಗಿ ಆ ಪ್ರಯತ್ನ ವಿಫಲವಾಗಿತ್ತು.
ಪುರಸಭೆಯ ನಿರ್ಧಾರ, ಅಧಿಕಾರಿಗಳ ಆದೇಶಕ್ಕೆ ಸವಾಲು:ಸದ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉಪವಿಭಾಗಾಧಿಕಾರಿಗಳು ಹುಳಿಯಾರಿನ ಕಸವನ್ನು ತಾತ್ಕಾಲಿಕವಾಗಿ ಚಿಕ್ಕನಾಯಕನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲು ಸೂಚಿಸಿದ್ದರು. ಆದರೆ, ಚಿಕ್ಕನಾಯಕನಹಳ್ಳಿ ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರು ಸಭೆ ನಡೆಸಿ, ಹುಳಿಯಾರಿನಿಂದ ಕಸವನ್ನು ಇಲ್ಲಿಗೆ ತರಬಾರದು ಎಂದು ನಿರ್ಣಯ ಕೈಗೊಂಡಿದ್ದಾರೆ. ಕಸ ವಿಲೇವಾರಿಗೆ ತೆರಳಿದ್ದ ವಾಹನಗಳನ್ನು ಮಾರ್ಗ ಮಧ್ಯೆ ತಡೆದು ವಾಪಸ್ ಕಳುಹಿಸಲಾಗಿದೆ. ಈ ಘಟನೆಯು ಉಪವಿಭಾಗಾಧಿಕಾರಿಗಳ ಆದೇಶ ಮತ್ತು ಪುರಸಭೆಯ ನಿರ್ಣಯಗಳ ನಡುವೆ ಸಂಘರ್ಷ ಸೃಷ್ಟಿಸಿದೆ.
ಪ್ರಶ್ನೆಗಳ ಸುರಿಮಳೆ, ವೈಫಲ್ಯದ ಸೂಚನೆ:ಚಿಕ್ಕನಾಯಕನಹಳ್ಳಿಯ ಪುರಸಭೆ ನಾಮಿನಿ ಸದಸ್ಯ ಮೊಹಮ್ಮದ್ ಹುಸೇನ್ ಗುಂಡಾ ಅವರು ಈ ಪರಿಸ್ಥಿತಿ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ 7 ವರ್ಷವಾದರೂ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡದಿರುವುದು ಏಕೆ?. ಇದು ಅಧಿಕಾರಿಗಳ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸುಮಾರು 25-30 ಕಿಲೋ ಮೀಟರ್ ದೂರ ಕಸ ಸಾಗಿಸುವುದರಿಂದ ಆರ್ಥಿಕ ನಷ್ಟ ಆಗುತ್ತದೆ ಎಂದರು.
ಅಧಿಕಾರಿಗಳ ಗಮನಕ್ಕೆ ತುರ್ತು ಮನವಿ:ಹುಳಿಯಾರಿನಲ್ಲಿ ಕಸ ವಿಲೇವಾರಿಯ ಸಮಸ್ಯೆ ಒಂದು ಕಗ್ಗಂಟಾಗಿ ಪರಿಣಮಿಸಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪಟ್ಟಣ ಪಂಚಾಯಿತಿಗೆ ಅಗತ್ಯವಾದ ಜಾಗವನ್ನು ಮಂಜೂರು ಮಾಡುವ ಕುರಿತು ಉಪವಿಭಾಗಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಕಸದ ಸಮಸ್ಯೆಯಿಂದ ಬೇಸತ್ತು ಹೋಗಿರುವ ಜನರು ರಸ್ತೆಗಿಳಿಯುವ ಮುನ್ನವೇ ತುರ್ತು ಕ್ರಮ ಕೈಗೊಳ್ಳಬೇಕಿದೆ. ಸಾರ್ವಜನಿಕರ ಆರೋಗ್ಯ ಮತ್ತು ನೈರ್ಮಲ್ಯದ ಹಿತದೃಷ್ಟಿಯಿಂದ ಈ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. ಇಲ್ಲವಾದರೆ, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.