ಜಿಲ್ಲೆ

ಮಳಿಗೆಗಳ ಮಾಲೀಕರಿಗೆ ಕಸದ ಶಾಕ್!

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದ ಅಂಗಡಿಮುಂಗಟ್ಟುಗಳ ಮಾಲೀಕರಿಗೆ ಅವರದೇ ಅಂಗಡಿಗಳ ಮುಂದೆ ಅದೇ ಕಸ ತಂದು ಸುರಿಯುವ ಮೂಲಕ ವೆಂಕಟಗಿರಿ ಗ್ರಾಪಂ ಸಿಬ್ಬಂದಿ ಕಸದ ಶಾಕ್ ನೀಡಿದೆ.

ದೇವನಹಳ್ಳಿ ತಾಲೂಕು ವೆಂಕಟಗಿರಿಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಹೋಟೆಲ್, ಬೇಕರಿ, ವೈದ್ಯಕೀಯ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ, ಕೆರೆಗೆ ಸುರಿಯುತ್ತಿದ್ದವರ ವಿರುದ್ಧ ಗ್ರಾಮ ಪಂಚಾಯಿತಿ ವಿಶೇಷ ಕ್ರಮಕ್ಕೆ ಮುಂದಾಗಿದ್ದು, ಕಸ ಎಸೆಯುತ್ತಿದ್ದವರಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಬಿಸಿ ಮುಟ್ಟಿಸಿದೆ. ಈ ವಿನೂತನ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಅಂಗಡಿ ಮಾಲೀಕರು ಜನರಿಂದ ಛೀಮಾರಿ ಎದುರಿಸುವಂತಾಗಿದೆ.

ಸಾಕಷ್ಟು ಪ್ರಚಾರ ಮಾಡಿದ್ದೇವೆ: ಪಂಚಾಯಿತಿಯಿಂದಲೇ ಕಸ ವಿಲೇವಾರಿ ಮಾಡಲು ವಾಹನ ವ್ಯವಸ್ಥೆ ಮಾಡಿದ್ದೇವೆ. ಸೂಕ್ತವಾಗಿ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಿ ಎಂದು ಸಾಕಷ್ಟು ಪ್ರಚಾರ ಮಾಡಿದ್ದೇವೆ. ಆದರೂ ಬೇಕರಿ, ಹೋಟೆಲ್‌ನವರು ತ್ಯಾಜ್ಯವನ್ನು ಕೆರೆಗೆ ಸುರಿದು ಪರಿಸರ ನಾಶ ಮಾಡುತ್ತಿದ್ದಾರೆ. ಆದ ಕಾರಣ ಅವರು ಹಾಕಿದ್ದ ಕಸವನ್ನು ಅವರ ಅಂಗಡಿ ಮುಂದೆ ಸುರಿದಿದ್ದೇವೆ ಎಂದು ಗ್ರಾಪಂ ಸಿಬ್ಬಂದಿ ತಿಳಿಸಿದ್ದಾರೆ.

ಎಚ್ಚರಿಕೆ ಘಂಟೆ: ಪ್ರತಿಯೊಬ್ಬರು ವಾಣಿಜ್ಯ ವಹಿವಾಟು ಮಾಡುವ ಅಂಗಡಿ ಮುಂಗಟ್ಟುಗಳನ್ನು ನಡೆಸಲು ಕಡ್ಡಾಯವಾಗಿ ಗ್ರಾಪಂನಿಂದ ಪರವಾನಗಿ ಪಡೆದುಕೊಳ್ಳಬೇಕು. ಬೇಕರಿ, ಹೊಟೇಲ್‌ಗಳಲ್ಲಿ ಉತ್ಪತ್ತಿಯಾಗುವ ಕಸದ ಆಧಾರದಲ್ಲಿ ನಾವು ಶುಲ್ಕ ನಿಗದಿ ಮಾಡುತ್ತೇವೆ, ಆದರೆ ಹಲವರು ನಿಯಮ ಉಲ್ಲಂಘನೆ ಮಾಡುವ ಜತೆಗೆ ಅವೈಜ್ಞಾನಿಕ ಕಸ ವಿಲೇವಾರಿ ಮಾಡಿ ಗ್ರಾಮೀಣ ಭಾಗದ ಸೌಂದರ್ಯಕ್ಕೆ ಧಕ್ಕೆ ತರುವುದಲ್ಲದೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದಾರೆ. ಇದು ಅವರಿಗೆ ಎಚ್ಚರಿಕೆ ಕರೆಘಂಟೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮವಹಿಸಲಾಗುವುದು ಎಂದು ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೀಕರಿಗೆ ಸಂದೇಶ ರವಾನೆ: ಕೆರೆಯ ಇಕ್ಕೆಲಗಳಲ್ಲಿ ಸ್ಥಳೀಯ ಮೆಡಿಕಲ್ ಸ್ಟೋರ್, ಕ್ಲಿನಿಕ್‌ಗಳು, ಹೋಟೆಲ್, ಬೇಕರಿಯವರು ಸುರಿದಿದ್ದ ಕಸವನ್ನು ತುಂಬಿಕೊಂಡು ಬಂದ ಗ್ರಾಮ ಪಂಚಾಯಿತಿ ಸಿಬ್ಬಂದಿ ಅವರೇ ಸುರಿದಿದ್ದ ಕಸವನ್ನು ಅವರ ಅಂಗಡಿ, ಮುಂಗಟ್ಟುಗಳ ಮುಂದೆಯೇ ಸುರಿದು ಅವರಿಗೆ ಪರಿಸರ ನಾಶದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಎಚ್ಚರಿಕೆ ರವಾನಿಸಿದ್ದಾರೆ. ಮುಂದಿನ ದಿನಗಳಲ್ಲೂ ಎಚ್ಚೆತ್ತುಕೊಳ್ಳದಿದ್ದರೆ ಇದೇ ಪುನಾವರ್ತನೆಯಾಗಲಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳು ಕಾನೂನು ಬಾಹಿರವಾಗಿ ಕಸ ವಿಲೇವಾರಿ ಮಾಡದಂತೆ ಮೂರು ಬಾರಿ ಸಂಬಂಧಪಟ್ಟ ಮಾಲೀಕರಿಗೆ ತಿಳಿಸಲಾಗಿದೆ. ಸಾಕಷ್ಟು ಬಾರಿ ಮೌಖಿಕವಾಗಿ ತಿಳಿಸಿದ್ದರೂ, ಕಸವನ್ನು ಕೆರೆಗೆ ಸುರಿಯಲಾಗುತ್ತಿತ್ತು. ಇದರಿಂದ ಕೆರೆಯ ನೀರು ಕಲುಷಿತವಾಗುತ್ತಿರುವುದರ ಜತೆಗೆ ನೀರು ಕುಡಿಯುವ ದನಕರುಗಳಿಗೂ ತೊಂದರೆಯಾಗುತ್ತದೆ. ಇದರಿಂದ ಈ ವಿನೂತನ ಕ್ರಮಕೈಗೊಳ್ಳಲಾಗಿದೆ.

ಬಸವನಗೌಡ ಗಂಗಪ್ಪಳವರ್, ವೆಂಕಟಗಿರಿಕೋಟೆ ಪಿಡಿಒ