ಜಗದೀಶ ಹೊಂಬಳಿ ಬೆಳಗಾವಿ
ಕಸದಿಂದ ರಸ ಎನ್ನುವಂತೆ ಬೆಳಗಾವಿ ಮಹಾನಗರ ಪಾಲಿಕೆ ಇದೀಗ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಿ ಕಸ ನಿರ್ವಹಣೆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು, ಇದು ಜನರ ಮೆಚ್ಚುಗೆಗೂ ಪಾತ್ರವಾಗಿದೆ.
ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಉತ್ಪತ್ತಿಯಾಗುತ್ತಿರುವ ಕಸ ನಿರ್ವಹಣೆಗೆ ಮಹಾನಗರ ಪಾಲಿಕೆ ಈ ವಿನೂತನ ಕ್ರಮ ಕೈಗೊಂಡಿದೆ. ಎಪಿಎಂಸಿಯಲ್ಲಿ ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುಮಾರು 5 ಟನ್ ಕಸ ಸಂಗ್ರಹವಾಗುತ್ತದೆ. ಪಾಲಿಕೆಯ 15ನೇ ಹಣಕಾಸು ಯೋಜನೆಯ 5 ಕೋಟಿ ರೂಪಾಯಿ ಪೈಕಿ 1.4 ಕೋಟಿ ರೂ. ವೆಚ್ಚದಲ್ಲಿ ‘ಕಸದಿಂದ ವಿದ್ಯುತ್ ಉತ್ಪಾದನೆ ಪ್ಲಾಂಟ್’ ನಿರ್ಮಾಣ ಮಾಡಲಾಗಿದೆ.
ಎಪಿಎಂಸಿಗೆ ವಿದ್ಯುತ್ ಬಳಕೆ: ಕಸದಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಎಪಿಎಂಸಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಪಿಎಂಸಿ ಆವರಣದ ಬೀದಿ ದೀಪ ಬಳಸುವುದಕ್ಕೆ ಯೋಜಿಸಿದ್ದಾರೆ. ಸದ್ಯಕ್ಕೆ ಎರಡೂವರೆ ಟನ್ ಕಸದಿಂದ 70ರಿಂದ 80 ಯೂನಿಟ್ ವಿದ್ಯುತ್ ಸಂಗ್ರಹಿಸುವ ಸಾಮರ್ಥ್ಯ ಘಟಕ ಹೊಂದಿದೆ. ಐದು ಟನ್ ಕಸದಿಂದ ಇನ್ನು ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಘಟಕದ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ವಿದ್ಯುತ್ ಉತ್ಪಾದನೆ ಜತೆ ಗೊಬ್ಬರ ಉತ್ಪಾದಿಸುವುದಕ್ಕೂ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರತಿದಿನ 100 ಕೆ.ಜಿ. ಗೊಬ್ಬರ ತಯಾರಿಸಿ, ರೈತರಿಗೆ ನೀಡುವ ಉದ್ದೇಶ ಹೊಂದಿದೆ. ಇದರಿಂದ ಎಪಿಎಂಸಿಗೆ ವಿದ್ಯುತ್ ಶುಲ್ಕ ಹೊರೆ ತಗ್ಗಲಿದೆ.
ಅರ್ಧ ಎಕರೆ ಪ್ರದೇಶದಲ್ಲಿ ನಿರ್ಮಾಣ: ಅರ್ಧ ಎಕರೆ ಪ್ರದೇಶದಲ್ಲಿ ಬಯೋ ಗ್ಯಾಸ್ ಘಟಕ ನಿರ್ಮಿಸಲಾಗಿದೆ. ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಐದು ಸಿಬ್ಬಂದಿ ನೇಮಕ ಮಾಡಿ, ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಇದರಲ್ಲಿ ಇಬ್ಬರು ಪ್ಲಾಂಟ್ ಆಪರೇಟರ್, ಮೂವರು ಸಹಾಯಕರನ್ನಾಗಿ ನೇಮಿಸಲಾಗಿದೆ. ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಎಪಿಎಂಸಿ ವಹಿವಾಟಿನ ವೇಳೆ ಇದ್ದು ಕೆಲಸ ನಿರ್ವಹಿಸಲಿದ್ದಾರೆ. ಈ ಘಟಕ ನಿರ್ಮಾಣದಿಂದ ಎಪಿಎಂಸಿಯಲ್ಲಿ ಕಸ ವಿಲೇವಾರಿ ತಾಪತ್ರೆಯ ತಪ್ಪಲಿದೆ. ಪರಿಸರ ಸಂರಕ್ಷಣೆ, ಪರಿಸರ ಸ್ವಚ್ಛತೆಯ ಭಾಗವಾಗಿ ಈ ಯೋಜನೆ ಮುಂದುವರಿಯಲಿದೆ ಎನ್ನುತ್ತಾರೆ ಅಧಿಕಾರಿಗಳು. ಇದೀಗ ಬಯೋಗ್ಯಾಸ್ ಘಟಕ ನಿರ್ಮಿಸಿ, ಕಸ ವಿದ್ಯುತ್ ಉತ್ಪಾದಿಸುವುದಕ್ಕೆ ಬಳಸಿಕೊಳ್ಳುತ್ತಿರುವ ಕಾರಣ ಕಸ ನಿರ್ವಹಣೆ ಹಾಗೂ ವಿದ್ಯುತ್‌ಗಾಗಿ ಪಾಲಿಕೆ ಖರ್ಚು ಮಾಡುತ್ತಿದ್ದ ಹಣವು ಉಳಿತಾಯವಾಗುತ್ತಿದೆ.
ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶದಿಂದ ಎಪಿಎಂಸಿಯಲ್ಲಿ ಬಯೋ ಗ್ಯಾಸ್ ಘಟಕ ನಿರ್ಮಾಣ ಮಾಡಿದ್ದೇವೆ. 20 ಗುಂಟೆ ಜಾಗದಲ್ಲಿ ಘಟಕ ನಿರ್ಮಾಣ ಮಾಡಲಾಗಿದೆ. ಘಟಕ ನಿರ್ಮಾಣದಿಂದ ಎಪಿಎಂಎಸಿಯಲ್ಲಿ ಪ್ರತಿದಿನ ಸಂಗ್ರಹವಾಗುವ ಕಸ ವಿಲೇವಾರಿ ಒತ್ತಡ ತಪ್ಪಲಿದೆ. ಹನುಮಂತ ಕಲಾದಗಿ, ಪರಿಸರ ಅಭಿಯಂತ ಮಹಾನಗರ ಪಾಲಿಕೆ ಬೆಳಗಾವಿ