ಜಿಲ್ಲೆ

ರಾಜ್ಯ ಹೆದ್ದಾರಿಯಲ್ಲಿ ತ್ಯಾಜ್ಯ ರಾಶಿ

Avinash R

ಬೆಳ್ತಂಗಡಿ: ಗ್ರಾಮ ಪಂಚಾಯಿತಿಗಳ ನಿರ್ಲಕ್ಷೃದಿಂದಾಗಿ ಗುರುವಾಯನಕೆರೆ ಶಕ್ತಿ ನಗರದ ಮೂಲಕ ಅಳದಂಗಡಿ-ನಾರಾವಿ ಕಡೆಗೆ ಹಾದು ಹೋಗುವ ರಾಜ್ಯ ಹೆದ್ದಾರಿಯ ಎಡ-ಬಲ ಬದಿಯಲ್ಲಿ ಅಲ್ಲಲ್ಲಿ ತ್ಯಾಜ್ಯದ ರಾಶಿಯದೇ ಕಾರುಬಾರು ಇದ್ದು ನೋಡಲು ಅಸಹ್ಯವಾಗುವಂತಿದೆ.

ರಾಜ್ಯ ಹೆದ್ದಾರಿ ಈಗಾಗಲೇ ಸಾಕಷ್ಟು ಅಗಲೀಕರಣಗೊಂಡು ಆರಾಮದಾಯಕ ಪ್ರಯಾಣಕ್ಕೆ ತಕ್ಕುದಾಗಿದೆ. ಇದರ ಎರಡೂ ಬದಿ ಪಾದಚಾರಿಗಳಿಗೆ ಹೋಗಲು ಸಾಕಷ್ಟು ಜಾಗವೂ ಇದೆ. ಆದರೆ ಈ ಜಾಗವನ್ನು ತ್ಯಾಜ್ಯ ಅಸಹ್ಯ ಉಂಟುಮಾಡುವಷ್ಟು ಕಬಳಿಸಿದೆ. ತ್ಯಾಜ್ಯದಲ್ಲಿ ಹೆಚ್ಚಿನ ಪಾಲು ಪ್ಲಾಸ್ಪಿಕ್. ಮುಂಜಾನೆಯ ಹೊತ್ತಲ್ಲಿ ಇಲ್ಲಿ ಬೇಕಾಬಿಟ್ಟಿ ಕಸ ಸುರಿಯುವುದು ಮಾಮೂಲು. ವಾಹನ ಸವಾರರಿಗೆ ಕೊಳೆತ ವಾಸನೆಯೂ ಇಲ್ಲಿ ಫ್ರೀ.

ಕುವೆಟ್ಟು, ಬಳಂಜ, ಬಡಗಕಾರಂದೂರು, ಸುಲ್ಕೇರಿ, ನಾರಾವಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಹೆದ್ದಾರಿ ಹಾದು ಹೋಗಿದೆ. ದಿನಾಲು ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಓಡಾಡುತ್ತಿರುತ್ತಾರೆ. ಇವರು ಕಣ್ಣು, ಮೂಗು ಮುಚ್ಚಿ ಹೋಗುತ್ತಾರೋ ಅಥವಾ ಕಂಡೂ ಕಾಣದಂತೆ ಸಂಚರಿಸುತ್ತಾರೋ ತಿಳಿಯದು.