ಸಿಂಧನೂರು: ನಗರದ ಗಂಗಾವತಿ ಮಾರ್ಗದಲ್ಲಿರುವ ಹಳ್ಳದ ಬಳಿ ಅಪರಿಚಿತರು ರಾಷ್ಟ್ರಧ್ವಜಗಳನ್ನು ತ್ಯಾಜ್ಯದಲ್ಲಿ ಬಿಸಾಕಿದ್ದು, ಈ ಕುರಿತು ಕ್ರಮಕೈಗೊಳ್ಳಬೇಕೆಂದು ನಮ್ಮ ಕರ್ನಾಟಕ ಸೇನೆ ಬುಧವಾರ ಒತ್ತಾಯಿಸಿತು.
ರಾಷ್ಟ್ರಧ್ವಜಗಳನ್ನು ಚೀಲದಲ್ಲಿ ತುಂಬಿ ತ್ಯಾಜ್ಯದ ರಾಶಿಯಲ್ಲಿ ಬಿಸಾಕಿರುವ ಕುರಿತು ಜನರು ನೀಡಿದ ಮಾಹಿತಿ ಮೇರೆಗೆ ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಸಂಘಟನೆಯವರು ಈ ಕುರಿತ ಮಾಹಿತಿಯನ್ನು ಸಿಂಧನೂರು ಗ್ರಾಮೀಣ ಠಾಣೆ ಪಿಎಸ್‌ಐ ಇಸಾಕ್ ಅಹ್ಮದ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಕಸದ ರಾಶಿಯಲ್ಲಿ ಬಿದ್ದಿದ್ದ ಧ್ವಜಗಳನ್ನು ಸಂಘಟನೆಯ ಕಾರ್ಯಕರ್ತರು ಚೀಲದಲ್ಲಿ ಜೋಡಿಸಿಟ್ಟು ಪೊಲೀಸರ ಸುಪರ್ದಿಗೆ ವಹಿಸಿದರು.
ರಾಷ್ಟ್ರಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲೆಂದರಲ್ಲಿ ಧ್ವಜಗಳನ್ನು ಬಿಸಾಕುವುದನ್ನು ತಡೆಯಬೇಕು. ತ್ಯಾಜ್ಯದಲ್ಲಿ ರಾಷ್ಟ್ರಧ್ವಜ ಎಸೆದಿರುವವರನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.