ಜಿಲ್ಲೆ

ಕಸ ಮಾಫಿಯಾಗೆ ಖಾಕಿ ಬ್ರೇಕ್

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರದಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿದ್ದ ಕಸ ಮಾಫಿಯಾದವರು ಪೊಲೀಸರು ಬಲೆಗೆ ಬಿದ್ದಿದ್ದಾರೆ. ಪೊಲೀಸರ ಕಾರ್ಯಾಚರಣೆಯಲ್ಲಿ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿದ್ದು, ಚಾಲಕರನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ಹೊರವಲಯದ ಅನೇಕ ಗ್ರಾಮಗಳಲ್ಲಿ ರಾತ್ರಿ ವೇಳೆ ಕೆಲ ಕಸದ ವಾಹನಗಳು ಬಂದು ಎಲ್ಲೆಂದರಲ್ಲಿ ಕಸ ಸುರಿದು ಹೋಗುತ್ತಿತ್ತು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಭಾನುವಾರ ತಡರಾತ್ರಿ ಕಾರ್ಯಾಚರಣೆ ರೂಪಿಸಿದ್ದರು.

ಸ್ಥಳೀಯರ ಸಹಕಾರ ಪಡೆದ ಖಾಕಿ: ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ್ದರು ರಾತ್ರಿ ಸಾಲಾಗಿ ಬರುತ್ತಿದ್ದ ಟ್ರ್ಯಾಕ್ಟರ್‌ಗಳ ಮೇಲೆ ದಾಳಿ ನಡೆಸಿ ಚಾಲಕರನ್ನು ವಶಕ್ಕೆ ಪಡೆಯಲಾಯಿತು, ನಂತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಲಾಗಿದ್ದು ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ. ಪೊಲೀಸರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು ಕಸ ಮಾಫಿಯಾ ತಡೆಗೆ ಪೊಲೀಸರೊಂದಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.

ಜನರಿಂದ ಪ್ರತಿಭಟನೆ: ಬಿಬಿಎಂಪಿ ವ್ಯಾಪ್ತಿಯ ಕಸವನ್ನು ಅನಧಿಕೃತವಾಗಿ ಈ ಭಾಗಗಳಲ್ಲಿ ಸುರಿದು ಹೋಗಲಾಗುತ್ತಿತ್ತು. ಇದೊಂದು ದೊಡ್ಡಮಟ್ಟದ ದಂಧೆಯಾಗಿದ್ದು ಲಕ್ಷಾಂತರ ರೂ.ವ್ಯವಹಾರ ನಡೆಯುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಸುತ್ತಮುತ್ತಲಿನ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಕೊನಪ್ಪನ ಅಗ್ರಹಾರ, ದೊಡ್ಡ ತೋಗೂರು, ಹೊಮ್ಮದೇವನಹಳ್ಳಿ ಭಾಗದ ಕಸವನ್ನು ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ತಂದು ಈ ಭಾಗದಲ್ಲಿ ಸುರಿಯಲಾಗುತ್ತಿತ್ತು ಇದಲ್ಲದೆ ಕಸಕ್ಕೆ ಬೆಂಕಿ ಹಾಕಿ ಕಸವನ್ನು ಸ್ಥಳದಲ್ಲಿಯೇ ಕರಗಿಸುವ ಪ್ರಯತ್ನ ನಡೆಯುತ್ತಿತ್ತು ಇದರಿಂದ ಏಳುವ ದಟ್ಟ ಹೊಗೆಗೆ ಗ್ರಾಮಗಳಲ್ಲಿ ಉಸಿರಾಡಲು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಗಳಲ್ಲಿ ಕಲುಷಿತ ವಾತಾವರಣಕ್ಕೆ ಕಸ ಮಾಫಿಯಾದವರು ಕಾರಣವಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾವಿಗಳ ಕೃಪಾಕಟಾಕ್ಷ: ಈ ಕಸ ಮಾಫಿಯಾದಲ್ಲಿ ಹಲವು ಪ್ರಭಾವಿಗಳ ಕೈವಾಡವಿದೆ, ಕಸ ವಿಲೇವಾರಿಗೆ ಬಿಬಿಎಂಪಿಯಿಂದ ಹಣ ಪಡೆದು ವಾಮಮಾರ್ಗದಲ್ಲಿ ಗ್ರಾಮೀಣ ಪ್ರದೇಶಗಳ ಹೊರವಲಯಗಳಲ್ಲಿ ಸುರಿಯಲಾಗುತ್ತಿದೆ ಇದರಿಂದ ಲಕ್ಷಾಂತರ ರೂಪಾಯಿ ಗಳಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ, ಬೆಟ್ಟ ದಾಸನಪುರ, ಹುಲಿಮಂಗಲ ಸೇರಿ ಹಲವು ಭಾಗಗಳಲ್ಲಿ ಇದು ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಇರುವುದು ಕಸ ಮಾಫಿಯಾದವರಿಗೆ ನೆರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.