ಮಾಗಡಿ: ಪಟ್ಟಣದಲ್ಲಿ ಪ್ರಮುಖ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ನಗರದ ಸೌಂದರ್ಯ ಹಾಳಾಗುವ ಜತೆಗೆ ಗಬ್ಬುನಾರುತ್ತಿದೆ.
ಬೆಂಗಳೂರಿಗೆ ಕೂಗಳತೆ ದೂರದ ಮಾಗಡಿ ಪಟ್ಟಣದಲ್ಲಿ ಸ್ವಚ್ಛತೆ ದೂರವಾಗಿದೆ.ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರ ಪಟ್ಟಣದಲ್ಲಿ ಅವ್ಯವಸ್ಥೆಯಿಂದ ಕೂಡಿದೆ.
ಬೆಂಗಳೂರು ಅಂತಾರಾಷ್ಟ್ರೀಯಮಟ್ಟದಲ್ಲಿ ತನ್ನದೆಯಾದ ರೀತಿಯಲ್ಲಿ ಹೆಸರುಗಳಿಸಿದೆ. ಆದರೆ, ನಾಡುಕಟ್ಟಿದ ಕೆಂಪೇಗೌಡರ ನೆಲದಲ್ಲಿ ಕಸದ ರಾಶಿ ಮೈದುಂಬಿ ಕುಳಿತಿರುವುದು ವಿಪರ್ಯಾಸವೇ ಸರಿ.
ಪಟ್ಟಣದ ಎನ್ಇಎಸ್ ಬಡಾವಣೆ ಗಣೇಶನ ದೇವಾಲಯ, ಗೌರಮ್ಮನ ಕೆರೆ, ಬಿ.ಕೆ.ರಸ್ತೆ, ಕಲ್ಯಾಗೇಟ್ ಗ್ರಾಮದೇವತೆ ದೇವಾಲಯದ ಬಳಿ ತ್ಯಾಜ್ಯ ತುಂಬಿ ತುಳುಕುತ್ತಿದೆ. ಹೀಗಿದ್ದರೂ ಪುರಸಭೆ ಪ್ರತಿದಿನ ಕಸ ತೆರವುಗೊಳಿಸಲು ಮುಂದಾಗಿಲ್ಲ. ಇದರಿಂದ ಕಸವೆಲ್ಲ ರಸ್ತೆಗೆ, ಸುತ್ತಮುತ್ತಲ ನಿವಾಸಿಗಳ ಮನೆಗಳಿಗೆ ತೂರಿಕೊಂಡು ಬರುತ್ತಿದೆ. ಬೀದಿನಾಯಿ, ಬಿಡಾಡಿ ದನಗಳ ವಾಸಸ್ಥಾನವಾಗಿದ್ದು, ಕೆಲ ಪ್ರಾಣಿಗಳು ಈ ಕಸವನ್ನೆ ತಿಂದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಇದೆ. ಮಳೆ ಬಂದರಂತೂ ನಾಗರಿಕರು ಸಂಚರಿಸುವುದೇ ದುಸ್ತರವಾಗಿದೆ.
ತ್ಯಾಜ್ಯ ಸಂಗ್ರಹದ್ದೇ ಸಮಸ್ಯೆ: ಪಟ್ಟಣದ ಗೌರಮ್ಮನಕೆರೆ, ಬಿ.ಕೆ.ರಸ್ತೆ, ಎನ್ಇಎಸ್ ಬಡಾವಣೆಗಳು ಪಟ್ಟಣಕ್ಕೆ ಪ್ರಮುಖ ಸ್ಥಳವಾಗಿದ್ದು, ಈ ರಸ್ತೆ ಮೂಲಕ ಪ್ರತಿನಿತ್ಯ ಸಾವಿರಾರು ನಾಗರಿಕರು, ವಿದ್ಯಾರ್ಥಿಗಳು ಗಬ್ಬು ನಾರುವ ಕಸದ ವಾಸನೆಯನ್ನೇಉಸಿರಾಗಿಸಿಕೊಂಡು ಹೋಗುವಂತಹ ದುಸ್ಥಿತಿ ಇದೆ. ಪಟ್ಟಣದ ಬಹುತೇಕ ವಾರ್ಡ್ಗಳಿಗೆ ಪುರಸಭೆ ಕಸದ ಗಾಡಿಗಳು ತೆರಳದೆ ಇರುವುದರಿಂದ ನಾಗರಿಕರು ತಮ್ಮಮನೆಗಳಲ್ಲಿನ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಪಟ್ಟಣ ವ್ಯಾಪ್ತಿಯ 23 ವಾರ್ಡ್ಗಳಲ್ಲಿನ ನಿವಾಸಿಗಳ ಮನೆಗಳ ಕಸ, ಪ್ಲಾಸ್ಟಿಕ್ ಸೇರಿ ಎಲ್ಲ ರೀತಿಯ ತ್ಯಾಜ್ಯ ಸಂಗ್ರಹಣೆ ಮಾಡಲು ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ. ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಸಮೀಪವೇ ಕಸ ವಿಲೇವಾರಿ ಟಕ ಇದ್ದರೂ ಪಟ್ಟಣದ ಕಸವನ್ನು ಪುರಸಭೆ ಟಕಕ್ಕೆ ಸಮರ್ಪಕವಾಗಿ ಸಾಗಾಣಿಕೆ ಮಾಡುವಲ್ಲಿ ರ್ನಿಲಸಿದೆ ಎಂಬುದು ನಾಗರಿಕರ ಆರೋಪವಾಗಿದೆ.
ಪಟ್ಟಣದಲ್ಲಿ ಕಸವನ್ನು ಸಂಗ್ರಹಿಸುವ ವಾಹನಗಳಿಗೆ ಇನ್ಶೂರೆನ್ಸ್ಮುಗಿದು ವರ್ಷಗಳೇ ಕಳೆದರೂ ನವೀಕರಣಕ್ಕೆ ಪುರಸಭೆ ಮುಂದಾಗಿಲ್ಲ. ಈ ವಾಹನದಲ್ಲಿ ತುಂಬುವ ಕಸದ ಮೇಲೆ ಟಾರ್ಪಲ್ ಮುಚ್ಚದೆ ಇರುವುದರಿಂದ ಗಾಳಿಗೆ ಕಸ ಹಾರಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಮೇಲೆ ಬೀಳುತ್ತಿದೆ. ಈ ಬಗ್ಗೆ ಪೌರ ಕಾರ್ಮಿಕರಿಗೆ ಎಷ್ಟೇ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌರಮ್ಮನ ಕೆರೆ ಸೇರುತ್ತಿದೆ ಕಸ: ಮಾಗಡಿ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಿರುವ ಇರುವ ಗೌರಮ್ಮನ ಕೆರೆಗೆ ಕಸ ಸುರಿಯುವವರನ್ನುತಡೆಯುವ ಕೆಲಸ ಮಾಗಡಿ ಪುರಸಭೆಯಿಂದ ಆಗುತ್ತಿಲ್ಲ. ಆಯ್ದ ಸ್ಥಳಗಳಲ್ಲಿ ಕೆಲವಾದರೂ ಕಸದ ತೊಟ್ಟಿ ಇಡಬೇಕು ಹಾಗೂ ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ಎಸೆಯುವವರ ಮೇಲೆ ನಿಗಾ ಇಡಬೇಕು. ತಿರುಮಲೆ ರಂಗನಾಥ ಸ್ವಾಮಿ ದೇವಸ್ಥಾನದ ಸಮೀಪವಿರುವ ನತ್ಯಾಜ್ಯ ಟಕವನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಮಾಗಡಿ ಪುರಸಭೆ ಮುಂದಾಗಿಲ್ಲ. ವರ್ಷದಿಂದ ಈ ಬಗ್ಗೆ ಹೋರಾಟ ನಡೆಯುತ್ತಿದ್ದರೂ ಆಸಕ್ತಿತೋರಿಸದೆ ಇರುವುದು ವಿಪರ್ಯಾಸ.
ಸರಕ್ಷತೆ ಸಲಕರಣೆಗಳಿಲ್ಲ: ಗ್ಲೌಸ್, ಬೂಟ್ ಮತ್ತು ಮಾಸ್ಕ್ ಹಾಗೂ ಪೌರಕಾರ್ಮಿಕರ ಸುರತ ಸಲಕರಣೆಗಳು ದೊರೆತಿಲ್ಲವಾದ್ದರಿಂದ ಪೌರಕಾರ್ಮಿಕರು ಕಸವನ್ನು ವಿಲೇವಾರಿ ಮಾಡಲು ಹಿಂದೇಟಾಗುತ್ತಿದ್ದಾರೆ. ನಿಯಮಿತವಾಗಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಇದ್ದರೂ ಅನೇಕರು ವಾಹನಗಳಿಗೆ ಕಸವನ್ನು ರ್ನಿದಿಷ್ಟ ಸಮಯದಲ್ಲಿ ಹಾಕುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಪೌರಕಾರ್ಮಿಕರು ಅಳಲು ತೋಡಿಕೊಂಡರು.
ಕಸ ಎಸೆಯದರೆ ದಂಡ ಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದೇವೆ. ಪಟ್ಟಣದಲ್ಲಿ ಅಂಗಡಿ, ಹೋಟೆಲ್ ಇರುವುದರಿಂದ ನಿತ್ಯ ತ್ಯಾಜ್ಯ ಬೀಳುತ್ತದೆ. ಅದೇ ದಿನವೇ ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದೇವೆ. ಪೌರನೌಕರರು ವಾರ್ಡ್ವಾರ್ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. > ರಮ್ಯಾ ನರಸಿಂಹಮೂರ್ತಿ ,ಅಧ್ಯೆ ಪುರಸಭೆ ಮಾಗಡಿಯ ಬಹುತೇಕ ಬಡಾವಣೆಗಳಲ್ಲಿ ನಿವಾಸಿಗಳು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯವನ್ನು ಎಸೆಯುತ್ತಿರುವುದರಿಂದ ಪಟ್ಟಣ ಕೊಳೆಗೇರಿಯಾಗಿ ಪರಿವರ್ತತವಾಗಿದೆ. ಪುರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. > ಎಚ್.ಎನ್.ಶಿವಲಿಂಗಯ್ಯ ಅಧ್ಯಕ್ಷ, ನಿಸರ್ಗ ಪರಿಚರಣ ಟ್ರಸ್ಟ್ ತ್ಯಾಜ್ಯ ಹರಡಿಕೊಂಡು ಪಟ್ಟಣ ಕೊಳಗೇರಿಯಾಗಿ ಪರಿವರ್ತತವಾಗಿದೆ. ಪುರಸಭೆ ಯಾವುದೇ ಸ್ಥಳದಲ್ಲಿ ಕಸಹಾಕಲು ತೊಟ್ಟಿ ನಿರ್ಮಿಸದ ಕಾರಣ ಬಯಲಲ್ಲಿ ಹಾಕಿದ ಕಸ ಎಲ್ಲೆಡೆ ಆವರಿಸುತ್ತಿದೆ. > ಎಂ.ಜಿ. ಮಂಜುನಾಥ್ ಸ್ಥಳಿಯ ನಿವಾಸಿ