ಜಿಲ್ಲೆ

ಕಸಮುಕ್ತ ಬಸ್ ತಂಗುದಾಣಗಳು

ಉತ್ತರ ಕನ್ನಡ ಡೆಸ್ಕ್

ಸಿದ್ದಾಪುರ: ತಾಲೂಕಿನ ಗ್ರಾಮೀಣ ಭಾಗದ ಬಸ್ ನಿಲ್ದಾಣಗಳು ಇದೀಗ ಕಸಮುಕ್ತವಾಗಿದ್ದು, ಇದು ನಿರಂತರವಾಗಿರುವಂತೆ ಸಾರ್ವಜನಿಕರು ನೋಡಿಕೊಳ್ಳಬೇಕಾಗಿದೆ.

ಶಾಸಕ ಭೀಮಣ್ಣ ನಾಯ್ಕ ಅವರು ಶಿರಸಿ-ಸಿದ್ದಾಪುರ ಕ್ಷೇತ್ರದ ತಾಪಂ ಇಒ ಹಾಗೂ ಎಲ್ಲ ಗ್ರಾಪಂಗಳ ಪಿಡಿಒಗಳ ಸಭೆ ಕರೆದು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಕಸಮುಕ್ತ ಗ್ರಾಮವನ್ನಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸೂಚನೆ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಎಲ್ಲ ಗ್ರಾಪಂಗಳು ಗುರುವಾರ, ಶುಕ್ರವಾರ ಹಾಗೂ ಶನಿವಾರ ತಮ್ಮ ಜವಾಬ್ದಾರಿ ನಿರ್ವಹಿಸಿ ಜನರಿಂದ ಮೆಚ್ಚುಗೆ ಗಳಿಸಿದರು.

ಬಸ್ ನಿಲ್ದಾಣ ಸ್ವಚ್ಛತೆಗೆ ಗ್ರಾಪಂಗೆ ಯಾವುದೇ ವೆಚ್ಚ ಬಾರದಂತೆ ನೋಡಿಕೊಳ್ಳಬೇಕು. ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸದಸ್ಯರ ಮಾರ್ಗದರ್ಶನ ಪಡೆದು ಇದನ್ನು ಅಭಿಯಾನದ ಮಾದರಿಯಂತೆ ನಡೆಸಬೇಕು ಎನ್ನುವ ಶಾಸಕರ ಸೂಚನೆಯನ್ನು ಪಾಲಿಸಿದ್ದಾರೆ. ತಾಪಂ ಇಒ ಅವರ ಮಾರ್ಗದರ್ಶನದಂತೆ ತಾಲೂಕಿನ 23 ಗ್ರಾಪಂನವರು ನಾವು ಮೊದಲು ಮಾದರಿ ಆಗಬೇಕು ಎಂದು ಮೂರು ದಿನಗಳ ಕಾಲ ಅಧಿಕಾರಿಗಳು, ಸಿಬ್ಬಂದಿ ಗುದ್ದಲಿ, ಬುಟ್ಟಿ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಶಾಸಕರಾದ ಭೀಮಣ್ಣ ನಾಯ್ಕ ಅವರ ನಿರ್ದೇಶನದ ಮೇರೆಗೆ ತಾಲೂಕಿನಲ್ಲಿರುವ ಎಲ್ಲ ಬಸ್ ನಿಲ್ದಾಣಗಳ ಸ್ವಚ್ಛತಾ ಕಾರ್ಯವನ್ನು ಗ್ರಾಪಂನವರು ನಡೆಸಿದ್ದಾರೆ. ಅಗತ್ಯ ಇರುವ ಬಸ್ ನಿಲ್ದಾಣಕ್ಕೆ ಪೇಂಟಿಂಗ್ ಮಾಡಲಾಗುತ್ತದೆ. 15 ದಿನಕ್ಕೊಮ್ಮೆ ಪರಿಶೀಲಿಸಿ ಪುನಃ ಸ್ವಚ್ಛತೆ ಮಾಡಲಾಗುವುದು. ಇದೊಂದು ನಿರಂತರ ಪ್ರಕ್ರಿಯೆ ಆಗಿದೆ. ಸಾರ್ವಜನಿಕರೂ ಸಹಕರಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ಸಹಕರಿಸಬೇಕು. ದೇವರಾಜ ಹಿತ್ತಲಕೊಪ್ಪ, ತಾಪಂ ಇಒ ಸಿದ್ದಾಪುರ