ವಿಜಯವಾಣಿ ಸುದ್ದಿಜಾಲ ಧಾರವಾಡ ಇಡೀ ನಗರ ಸುಂದರ ಹಾಗೂ ಸ್ವಚ್ಛವಾಗಿ ಇರಲಿ ಎಂಬ ಕಾರಣಕ್ಕೆ ಮಹಾನಗರ ಪಾಲಿಕೆ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆದರೆ ಆ ಕಾರ್ಯಕ್ಕೆ ಜನರಿಂದ ಸೂಕ್ತ ಬೆಂಬಲ ಸಿಗದಿರುವುದು, ಸಿಬ್ಬಂದಿ ನಿರ್ಲಕ್ಷದಿಂದ ಸಂರ್ಪೂಣ ಯಶಸ್ಸು ಸಿಗದಂತಾಗಿದೆ. ಮೊದಲಿನ ದಿನಗಳಲ್ಲಿ ಬಡಾವಣೆಗಳ ರಸ್ತೆ ಪಕ್ಕದಲ್ಲೇ ಜನರು ಕಸ ವಿಲೇವಾರಿ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಮನೆ ಮನೆಗೆ ತೆರಳಿ ಕಸ ಸಂಗ್ರಹ ವ್ಯವಸ್ಥೆ ಜಾರಿಯಾಗಿದೆ. ಆದಾಗ್ಯೂ ಬಡಾವಣೆಯ ಖಾಲಿ ಜಾಗಗಳಲ್ಲಿ, ರಸ್ತೆಗಳ ಪಕ್ಕದಲ್ಲೇ ಕಸ ಹಾಕುವ ಪ್ರಕ್ರಿಯೆ ಯಥೇಚ್ಛವಾಗಿ ನಡೆದಿದೆ. ಈ ಸಮಸ್ಯೆಗೆ ಇತಿಶ್ರೀ ಹಾಡಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ನಗರದ ಬಹುತೇಕ ಬಡಾವಣೆಯ ರಸ್ತೆ ಬದಿ, ನಿವೇಶನಗಳಲ್ಲಿ ಕಸ ಎಸೆಯಲಾಗಿದೆ. ಕೊಳೆತ ತರಕಾರಿ, ಹಣ್ಣುಗಳು, ಹೋಟೆಲ್ ತ್ಯಾಜ್ಯದ ರಾಶಿಯಿಂದ ಬೀರುವ ದುರ್ನಾತದಿಂದ ಜನರು ಮೂಗು ಮುಚ್ಚಿಕೊಂಡೇ ಓಡಾಡುವಂತಹ ಸ್ಥಿತಿ ಇದೆ. ಇದಕ್ಕೆ ಕೆಲ ಕಡೆಗಳಲ್ಲಿ ಕಸ ವಿಲೇವಾರಿ ನಿಯಮಿತವಾಗಿ ನಡೆಯದಿರುವುದೇ ಕಾರಣ. ಆಲೂರು ವೆಂಕಟರಾವ್ ಮಾರ್ಗ, ಹಳಿಯಾಳ ನಾಕಾದ ಕುರುಪಾಲಿಸ್ ಕಾಂಪೌಂಡ್, ಮಾಳಮಡ್ಡಿ, ರೈಲ್ವೆಸ್ಟೇಶನ್ ರಸ್ತೆ, ಮದಿಹಾಳ, ರಾಮನಗರ, ಸಾರಸ್ವತಪುರ, ಕೆಲಗೇರಿ ರಸ್ತೆ ಸಹಿತ ವಿವಿಧ ಕಡೆಗಳಲ್ಲಿ ಕಸದ ರಾಶಿ ರಾರಾಜಿಸುತ್ತಿವೆ. ಕೆಲ ಕಡೆಗಳಲ್ಲಿ ಚರಂಡಿಗೆ ಕಸ ಎಸೆಯಲಾಗುತ್ತಿದೆ. ಇಂತಹ ಜಾಗಗಳು ಸೊಳ್ಳೆ, ಕ್ರಿಮಿಕೀಟಗಳ ಆಶ್ರಯ ತಾಣವೂ ಆಗಿವೆ. ರಸ್ತೆಗಳಲ್ಲಿ ಕಸ ಹಾಕುವುದನ್ನು ತಡೆಯಲು ಬಡಾವಣೆಗಳಲ್ಲಿ ಕಸ ಹಾಕುವ ಜಾಗವನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಿ ರಂಗೋಲಿ ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಹೋಟೆಲ್, ಪಾನ್ಶಾಪ್ ಸೇರಿ ಇತರ ಅಂಗಡಿಕಾರರು, ಪಾದಚಾರಿಗಳು ನಗರದ ರಸ್ತೆಗಳಲ್ಲಿ ಕಸ ಹಾಕದಿರಲಿ ಎಂದು ಪ್ರಮುಖ ರಸ್ತೆಗಳ ಪುಟ್ಪಾತ್ನಲ್ಲಿ ಜೋಡಿ ಕಸದ ತೊಟ್ಟಿ ಇಡಲಾಗಿತ್ತು. ನಂತರ ದಂಡ ಹಾಕುವ ಕೆಲಸವೂ ನಡೆಯಿತು. ಆದರೆ ಈ ಎಲ್ಲ ಪ್ರಯೋಗ ಆರಂಭವಾದಾಗ ಮಾತ್ರ ಜನರ ಎಚ್ಚೆತ್ತುಕೊಂಡು ವಾಹನದಲ್ಲೇ ಕಸ ಹಾಕುತ್ತಿದ್ದರು. ಇದೀಗ ಪ್ರಯೋಗಗಳು ತೆರೆಮರೆಗೆ ಸರಿದಂತೆ ರಸ್ತೆಗಳಿಗೆ ಕಸ ಹಾಕುವುದು ಹೆಚ್ಚಾಗಿದೆ. ರಸ್ತೆ, ನಿವೇಶನಗಳಲ್ಲಿ ಕಸ ಸಂಗ್ರಹವಾಗುತ್ತಿದ್ದಂತೆ ಪಾಲಿಕೆಗೆ ದೂರು ನೀಡುವ ಸಾರ್ವಜನಿಕರೂ ಕೊಂಚ ಎಚ್ಚೆತ್ತುಕೊಂಡರೆ ನಗರ ಸ್ವಚ್ಛವಾಗಿದ್ದು, ರೋಗಗಳಿಂದ ಮುಕ್ತವಾಗಿರಲು ಸಹಾಯವಾಗಲಿದೆ. ಮೇಲ್ವಿಚಾರಣೆ ಸರಿಯಾಗಲಿ: ಕಸದ ವಾಹನ ಮನೆಗಳಿಗೆ ತೆರಳುತ್ತಿದ್ದರೂ ರಸ್ತೆ ಪಕ್ಕ ರಾಶಿ ರಾಶಿ ಕಸ ಇರುವುದನ್ನು ಕಂಡರೆ ಮೇಲ್ವಿಚಾರಣೆ ಸರಿಯಾಗಿಲ್ಲ ಎಂಬುದು ತಿಳಿಯಲಿದೆ. ಮೇಲ್ವಿಚಾರಣೆಗೆ ನೇಮಕವಾದ ಅಧಿಕಾರಿ ನಿತ್ಯ ವಾರ್ಡ್ಗಳಿಗೆ ತೆರಳಿ ಕಸದ ವಾಹನ ಮಾಹಿತಿ ಸೇರಿ ಕಸ ವಿಲೇವಾರಿ ಗಮನಿಸುವುದರ ಜತೆಗೆ ರಸ್ತೆ ಪಕ್ಕ ಕಸ ಹಾಕುವ ಜನರಿಗೆ ಎಚ್ಚರಿಕೆ ಸಹ ನೀಡಬೇಕು. ಅಂದಾಗಲೇ ಇದಕ್ಕೊಂದಿಷ್ಟು ಪರಿಹಾರ ಸಿಗಲಿದೆ.
* ವಿಷ್ಣುತೀರ್ಥ ಕೊರ್ಲಹಳ್ಳಿ, ಪಾಲಿಕೆ ಸದಸ್ಯ (ವಾರ್ಡ್ 15)
ವಾರ್ಡನ ಬಡಾವಣೆಗಳಲ್ಲಿ ಬ್ಲ್ಯಾಕ್ ಸ್ಪಾಟ್ ಗುರುತಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಇದರಿಂದ ರಸ್ತೆ ಪಕ್ಕ ಕಸ ಹಾಕುವ ಕೆಲಸ ಕೊಂಚ ಕಡಿಮೆಯಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆದಿದೆ. ಇದರ ಜತೆಗೆ ಸಂಜೆ ಸಮಯದಲ್ಲಿ ಹೋಟೆಲ್, ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ವಾಹನ ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂಗಡಿಗಳ ಬಳಿ ಕಸದ ಬುಟ್ಟಿ ಇಡಲು ಸಹ ಯೋಜನೆ ರೂಪಿಸಲಾಗಿದೆ.